ನ್ಯೂಸ್

ಹೊಸ ದಾಖಲೆ ಬರೆದ ಷೇರುಪೇಟೆ: ಚೆನ್ನೈ ಕಂಪನಿಯ 500 ಉದ್ಯೋಗಿಗಳು ಕೋಟ್ಯಧಿಪತಿಗಳು!

ಮುಂಬೈ: ಭಾರತದ ಷೇರುಪೇಟೆ ಗುರುವಾರ ಸಾರ್ವಕಾಲಿಕ ಎತ್ತರ ತಲುಪಿ ದಾಖಲೆ ಬರೆಯಿತು. ಭಾರತದ ರೂ. ಮೌಲ್ಯ ಅಮೆರಿಕದ ಡಾಲರ್ ಎದುರು 23 ಪೈಸೆ ವೃದ್ಧಿಯಾಗಿದ್ದು 73.64 ರೂ. ತಲುಪಿತ್ತು. ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 958.03 ಅಂಶ (1.63%) ಏರಿಕೆಯಾಗಿ 59,885.36 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ 59,957.25 ಅಂಶದ ಹೊಸ ಎತ್ತರಕ್ಕೇರಿತ್ತು. ಎನ್​ಎಸ್​ಇ ನಿಫ್ಟಿ ಕೂಡ 276.30 ಅಂಶ (1.57%) ಏರಿ 17,822.95 ಅಂಶದ ಹೊಸ ಎತ್ತರದಲ್ಲಿ ದಿನದ ವಹಿವಾಟು ಮುಗಿಸಿದೆ. ಇಂಟ್ರಾ ಡೇನಲ್ಲಿ ಇದು 17,843.90 ಅಂಶ ತಲುಪಿತ್ತು.

ಎಲ್​ಐಸಿ ಐಪಿಒದಲ್ಲಿ ಚೀನಾ ಹೂಡಿಕೆಗೆ ಬ್ರೇಕ್ : ಭಾರತದ ಮುಂಚೂಣಿ ವಿಮಾ ಕಂಪನಿ ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶೂರೆನ್ಸ್ ಕಾರ್ಪೆರೇಶನ್ ಆಫ್ ಇಂಡಿಯಾ (ಎಲ್​ಐಸಿ)ದಲ್ಲಿ ಐಪಿಒ ಮೂಲಕ ಚೀನಾದ ಹೂಡಿಕೆದಾರರು ಹೂಡಿಕೆ ಮಾಡದಂತೆ ತಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತ ಮತ್ತು ಚೀನಾ ನಡುವೆ ಸಾಕಷ್ಟು ವಿಷಯಗಳಲ್ಲಿ ಭಿನ್ನಮತವಿದ್ದು, ಭೌಗೋಳಿಕ ಗಡಿ ವಿಚಾರದಲ್ಲಿ ಸಂಘರ್ಷಮಯ ಸನ್ನಿವೇಶವಿದೆ. ಹೀಗಾಗಿ, ಇನ್ನಷ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸರ್ಕಾರ ಸಿದ್ಧವಿಲ್ಲದ ಕಾರಣ ಈ ತೀರ್ವನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದಷ್ಟೆ ಎಲ್​ಐಸಿಯ ಐಪಿಒದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್​ಐಐ)ಗೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಾಕಾರಗೊಂಡರೆ ಎಲ್​ಐಸಿಯಲ್ಲಿ ಶೇಕಡ 20ರಷ್ಟು ಎಫ್​ಐಐಗೆ ಅವಕಾಶ ಸಿಗಲಿದೆ ಎಂಬ ಮಾಹಿತಿ ಹೊರಬಿದ್ದಿತ್ತು.

ಚಿನ್ನ, ಬೆಳ್ಳಿ ದರ ಕುಸಿತ

ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರ ಪೇಟೆ ಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಮಿಗೆ 294 ರೂಪಾಯಿ ಇಳಿಕೆಯಾಗಿ 45,401 ರೂಪಾಯಿ ಆಗಿದೆ. ಬುಧವಾರ ಇದು 45,695 ರೂಪಾಯಿ ಇತ್ತು. ಇನ್ನೊಂದೆಡೆ ಬೆಳ್ಳಿಯ ದರ ಒಂದು ಕಿಲೋಗೆ 26 ರೂಪಾಯಿ ಏರಿಕೆಯಾಗಿ 59,609 ರೂಪಾಯಿ ಆಗಿದೆ. ಬುಧವಾರ ಇದರ ಬೆಲೆ 59,583 ರೂಪಾಯಿ ಇತ್ತು.

ಚೆನ್ನೈ ಕಂಪನಿಯ 500 ಉದ್ಯೋಗಿಗಳು ಕೋಟ್ಯಧಿಪತಿಗಳು!

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 2011ರಲ್ಲಿ ಸ್ಥಾಪನೆ ಯಾದ ಫ್ರೆಶ್ ವರ್ಕ್ಸ್ ಕಂಪನಿಯ 500 ಉದ್ಯೋಗಿಗಳು ಈಗ ಕೋಟ್ಯಧಿಪತಿಗಳು. ಈ ಕಂಪನಿ ಅಮೆರಿಕದ ನಾಸ್ಡಾಕ್ ಎಕ್ಸ್ ಚೇಂಜ್​ನಲ್ಲಿ ಐಪಿಒ ಬಿಡುಗಡೆ ಮಾಡಿದ್ದು, ಬುಧವಾರದ ಚೊಚ್ಚಲ ವಹಿವಾಟಿನಲ್ಲೇ 100 ಕೋಟಿ ಡಾಲರ್ ಸಂಗ್ರಹಿಸಿದೆ. ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 1000 ಕೋಟಿ ಡಾಲರ್ ಆಗಿದೆ. ಈ ಕಂಪನಿಯ ಕೇಂದ್ರ ಕಚೇರಿ ಕ್ಯಾಲಿಫೋರ್ನಿಯಾದಲ್ಲಿದೆ. ಇದು ಕಸ್ಟಮರ್ ಸರ್ವೀಸ್ ಕ್ಷೇತ್ರದ ಕಂಪನಿಯಾಗಿದ್ದು, ಐಪಿಒ ಮೂಲಕ 28.5 ದಶಲಕ್ಷ ಷೇರುಗಳನ್ನು ತಲಾ 32 ಡಾಲರ್​ನಿಂದ 34 ಡಾಲರ್ ಸ್ತರದಲ್ಲಿ ಇರಿಸಿತ್ತು. ಇದು ಏರಿಕೆಯಾಗಿ 36 ಡಾಲರ್​ಗೆ ವಿತರಿಸಿತ್ತು. ಲಿಸ್ಟಿಂಗ್ ಪ್ರೖೆಸ್ 36 ಡಾಲರ್ ಇದ್ದದ್ದು ಶೇಕಡ 30ರಷ್ಟು ಏರಿಕೆಯಾಗಿ ಓಪನಿಂಗ್ ಟ್ರೇಡ್​ನಲ್ಲಿ 46.67 ಡಾಲರ್ ತಲುಪಿತ್ತು. ಈ ಕಂಪನಿಯ ಸಂಸ್ಥಾಪಕ ಗಿರೀಶ್ ಮಾತೃಭೂತಂ ಈ ವಿದ್ಯಮಾನಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಭಾರತದಲ್ಲಿರುವ ಕಂಪನಿಯ 500 ಉದ್ಯೋಗಿಗಳ ಪೈಕಿ 70 ಉದ್ಯೋಗಿಗಳು 30 ವರ್ಷದೊಳಗಿನವರು ಎಂದು ಹೇಳಿದ್ದಾರೆ.