ಕೌಶಲಾಭಿವೃದ್ಧಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ರಾಜ್ಯದ ಆರು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವುದು; ಟೆಕ್ನಿಕಲ್ ಹೈಸ್ಕೂಲ್ ಸ್ಥಾಪನೆ ಘೋಷಣೆ ಹಾಗೂ ‘ಒಂದು ಜಿಲ್ಲೆ ಒಂದು ಕೌಶಲ’ ಯೋಜನೆಗೆ ಚಾಲನೆ ಮುಂತಾದವು ಇದರಲ್ಲಿ ಸೇರಿವೆ. ಇದರಿಂದ ಶಿಕ್ಷಣ ಹಾಗೂ ಕುಲಕಸುಬು ಆಧಾರಿತ ಪಾರಂಪರಿಕ ಕೌಶಲಕ್ಕೆ ಒತ್ತು ಸಿಗುವ ಆಶಾಭಾವನೆ ಇಟ್ಟುಕೊಳ್ಳಬಹುದು. ಇಂದಿನ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ, ವಿಶಾಲ ದೃಷ್ಟಿಕೋನದಲ್ಲಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಬದಲಾವಣೆ ಅಥವಾ ಹೊಸದರ ಸೇರ್ಪಡೆ ಅಗತ್ಯ. ಈ ನಿಟ್ಟಿನಲ್ಲಿ ಈಗ ಪ್ರಕಟಿಸಲಾದ ಯೋಜನೆಗಳು ಪರಿಣಾಮಕಾರಿಯಾಗಬಹುದೆಂದು ನಿರೀಕ್ಷಿಸಬಹುದು. ಐಐಟಿ ಮಾದರಿಯಲ್ಲಿ ರೂಪಿತವಾಗುವ ಆರು ಕಾಲೇಜುಗಳು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹೀಗೆ ಒಂದೊಂದು ವಿಷಯದಲ್ಲಿ ವಿಶೇಷತೆ ಹೊಂದಿರುತ್ತವೆ. ಈ ಕಾಲೇಜುಗಳನ್ನು ಈ ಶೈಕ್ಷಣಿಕ ವರ್ಷದಲ್ಲಿಯೇ ಆರಂಭಿಸುವಂತೆ ಮುಖ್ಯಮಂತ್ರಿಗಳು ಸಂಬಂಧಫಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ.
ನಮ್ಮಲ್ಲಿ ಕುಲ ಕಸುಬು ಆಧಾರಿತ ಪಾರಂಪರಿಕ ಕೌಶಲ ವಿಪುಲವಾಗಿದೆ. ಪ್ರತಿ ಜಿಲ್ಲೆಯಲ್ಲಿ ಅದರದೇ ಆದ ಹೆಗ್ಗುರುತುಗಳಿವೆ. ಆದರೆ ಆಧುನಿಕ ಭರಾಟೆಯಲ್ಲಿ ಇವಕ್ಕೆ ಹೊಳಪು ತಗ್ಗಿದೆ. ಈ ಕಲೆಯನ್ನು ಉಳಿಸುವುದರೊಂದಿಗೆ ಮಾರುಕಟ್ಟೆ, ಉದ್ಯೋಗಾವಕಾಶ ಸೃಷ್ಟಿಗಾಗಿ ‘ಒಂದು ಜಿಲ್ಲೆ ಒಂದು ಕೌಶಲ’ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಇಂತಹ ಕಾರ್ಯಕ್ರಮವನ್ನು ದೇಶದಲ್ಲಿ ಮೊದಲ ಬಾರಿಗೆ ರೂಪಿಸಿರುವುದು ವಿಶೇಷ. ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ಇದರ ಜಾರಿಯ ಉಸ್ತುವಾರಿಯಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನೂರು ಜನರನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ 31 ಜಿಲ್ಲೆಗಳಿಂದ 3100 ಜನರಿಗೆ ತರಬೇತಿ ನೀಡಲಾಗುತ್ತದೆ. ಅವರು ತರಬೇತಿ ಪಡೆಯುವುದರೊಂದಿಗೆ ಉದ್ಯಮಿಗಳಾಗಿಯೂ ಹೊರಹೊಮ್ಮಬಹುದು; ಇತರರಿಗೆ ಉದ್ಯೋಗ ನೀಡಬಹುದು.
ಪಾರಂಪರಿಕ ಕರಕುಶಲ ವಸ್ತುಗಳು ಇಂದಿನ ಸ್ಪರ್ಧೆಯಲ್ಲಿ ಮುಂಚೂಣಿಗೆ ಬರಲಾಗದೆ ಕಳೆಗುಂದುತ್ತಿವೆ. ಹೀಗಾಗಿ ಈ ಕಲೆಗಳ ಕುಶಲಕರ್ವಿುಗಳು ಜೀವನ ನಿರ್ವಹಣೆಗೆ ಪರ್ಯಾಯ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದ ಆಯಾ ಕಲೆಗಳ ಭವಿಷ್ಯಕ್ಕೆ ಅಪಾಯ. ಯಾವುದೇ ಉತ್ಪನ್ನವನ್ನು ತಯಾರಿಸುವ ಜತೆಗೆ ಮಾರುಕಟ್ಟೆಯೂ ಮುಖ್ಯ. ಈ ಹಿನ್ನೆಲೆಯಲ್ಲಿ ಇ- ಕಾಮರ್ಸ್ ವೇದಿಕೆಗಳು, ಕರಕುಶಲ ಅಭಿವೃದ್ದಿ ನಿಗಮ ಹಾಗೂ ಕೇಂದ್ರ ಸರ್ಕಾರದ ಹ್ಯಾಂಡಿಕ್ರಾಫ್ಟ್ ಎಕ್ಸ್ಪೋರ್ಟ್ ಕೌನ್ಸಿಲ್ ಜತೆಗೆ ಮಾರುಕಟ್ಟೆ ವ್ಯವಸ್ಥೆ ಕುರಿತು ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ರ್ಚಚಿಸಿರುವುದು ಸಮಂಜಸ ಹೆಜ್ಜೆ. ಕೊಪ್ಪಳದ ಕಿನ್ನಾಳ ಕಲೆ, ಆಟಿಕೆ, ಬೀದರ್ನ ಬಿದಿರಿ ಕಲೆ, ಕೋಲಾರದ ಶಿಲ್ಪಕಲೆ, ಬಾಗಲಕೋಟೆ ಹಸೆ ಚಿತ್ರ, ಶಿವಮೊಗ್ಗದ ಗಂಧದ ಕೆತ್ತನೆ, ಹಸೆ ಚಿತ್ರ ಇವೆಲ್ಲ ನಮ್ಮ ಹೆಮ್ಮೆಯ ಕೆಲ ನಿದರ್ಶನಗಳು ಮಾತ್ರ. ಇವತ್ತಿನ ಕಾಲಘಟ್ಟದಲ್ಲಿ ಇವನ್ನು ಉಳಿಸಿ ಬೆಳೆಸುವ ಜತೆಗೆ ವ್ಯಾಪ್ತಿಯನ್ನೂ ವಿಸ್ತರಿಸುವ ಈ ಉಪಕ್ರಮ ಸರಿಯಾಗಿ ಜಾರಿಗೆ ಬರುವ ನಿಟ್ಟಿನಲ್ಲಿ ಬದ್ಧತೆ ಹಾಗೂ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕಾದುದು ಅಗತ್ಯ.