ಶಿವಮೊಗ್ಗದಲ್ಲಿ ನಿವೃತ್ತರಾದ ಪಾಲಿಕೆ ನೌಕರರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಡಾ. ಕವಿತಾ ಯೋಗಪ್ಪನವರ್, ತುಷಾರ್ ಹೊಸೂರು, ಕುಮಾರ್, ಎನ್.ಗೋವಿಂದಪ್ಪ ಇತರರಿದ್ದರು.  
ನ್ಯೂಸ್

ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸರ್ಕಾರಿ ಕೆಲಸ ಒಂದರ್ಥದಲ್ಲಿ ಥ್ಯಾಂಕ್‌ಲೆಸ್ ಜಾಬ್. ಆದರೂ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲೇಬೇಕು ಎಂದು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಹೇಳಿದರು.

ವಯೋನಿವೃತ್ತಿ ಹೊಂದಿದ 10 ಮಂದಿ ಪಾಲಿಕೆ ನೌಕರರಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ನಿವೃತ್ತಿ ಹೊಂದಿರುವ ನೌಕರರೆಲ್ಲರೂ ಸುದೀರ್ಘ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ಪೌರ ಕಾರ್ಮಿಕರು ಕಷ್ಟದ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಹಲವು ಕಡೆ ಪೌರ ಕಾರ್ಮಿಕರಿಗೆ ವಿನಾಕಾರಣ ಕಿರಿಕಿರಿ ಉಂಟಾಗುತ್ತದೆ. ಆದರೂ ಹಿರಿಯ ಕಾರ್ಮಿಕರು ಅನುಸರಿಸಿಕೊಂಡು ಕೆಲಸ ಮಾಡುತ್ತಾರೆ. ಅವರಿಂದ ಪಾಲಿಕೆಗೆ ಒಳ್ಳೆಯ ಹೆಸರು ಬರುತ್ತಿದೆ ಎಂದು ತಿಳಿಸಿದರು.

ಕಾರ್ಮಿಕರಿಗೆ ಸಲ್ಲಬೇಕಾದ ಪಿಂಚಣಿ ಮತ್ತು ನೂತನ ವೇತನ ಶ್ರೇಣಿ ಸೇರಿ ಎಲ್ಲ ನಿವೃತ್ತಿ ಸೌಲಭ್ಯಗಳನ್ನು ತಕ್ಷಣದಿಂದಲೇ ನೀಡಲು ಪಾಲಿಕೆಯ ಆಡಳಿತ ವಿಭಾಗದಿಂದ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ 20ಕ್ಕೂ ಹೆಚ್ಚು ನೌಕರರು ನಿವೃತ್ತಿ ಹೊಂದಿದ್ದಾರೆ. ಇದರಿಂದ ಪಾಲಿಕೆಯ ನಿತ್ಯ ಕಾರ್ಯಗಳಿಗೆ ಸ್ಪಲ್ಪಮಟ್ಟಿನ ಹಿನ್ನಡೆಯಾಗುತ್ತಿದೆ. ಒಳ್ಳೆಯ ನೌಕರರನ್ನು ಬೀಳ್ಕೊಡುವಾಗ ಬೇಸರವಾಗುವುದು ಸಹಜ ಎಂದು ಹೇಳಿದರು.

ನಿವೃತ್ತರಾದ ರತ್ನಾಕರ್, ಸೂಲಯ್ಯ, ನಾರಾಯಣ್, ಮೂರ್ತಿ, ಬೈಲಪ್ಪ, ನರಸಿಂಹಮೂರ್ತಿ, ನಾಗರಾಜ್, ನರಸ, ಪೆಂಚಾಲಮ್ಮ, ಮುನಿನರಸಮ್ಮ ಅವರನ್ನು ಗೌರವಿಸಲಾಯಿತು. ಪಾಲಿಕೆ ಉಪ ಆಯುಕ್ತ ತುಷಾರ್ ಹೊಸೂರು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಗೋವಿಂದಪ್ಪ, ಉಪಾಧ್ಯಕ್ಷ ಕುಮಾರ್, ಮುಖ್ಯ ಲೆಕ್ಕಾಧಿಕಾರಿ ಡಕ್ಣಾನಾಯ್ಕಾ ಇತರರಿದ್ದರು.