ನ್ಯೂಸ್

ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸುಂದರಕಾಂಡ ಪಾರಾಯಣ, ಹನುಮಂತನ ಸ್ತೋತ್ರ ಪಠಣ ನಡೆಸಲು ಆಪ್​ ಶಾಸಕನ ನಿರ್ಧಾರ...

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ವೇಳೆ ಆಂಜನೇಯ, ಹನುಮಾನ್​ ಚಾಲೀಸಾಗಳನ್ನೆಲ್ಲ ರಾಜಕೀಯಗೊಳಿಸಿದ್ದು ಗೊತ್ತಿರುವ ವಿಚಾರವೇ.

ಹನುಮಂತನ ಪೂಜೆ ವಿಚಾರವನ್ನೇ ಇಟ್ಟುಕೊಂಡು ಬಿಜೆಪಿ ಮುಖಂಡರು ಮತ್ತು ಆಮ್​ ಆದ್ಮಿ ಪಾರ್ಟಿ ಮುಖಂಡರು ಪರಸ್ಪರ ಟೀಕೆ, ವಾಗ್ದಾಳಿ ಮಾಡಿಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಬಂದು ಜಯಸಾಧಿಸಿದ ಅರವಿಂದ್ ಕೇಜ್ರಿವಾಲ್​ ತಮ್ಮ ಭಾಷಣದಲ್ಲಿ ಹನುಮಂತನಿಗೆ ವಿಶೇಷ ಕೃತಜ್ಞತೆ ಹೇಳಿದ್ದರು.

ಇದೀಗ ಆಪ್​ ಶಾಸಕ ಸೌರಭ ಭಾರದ್ವಾಜ್​ ಅವರು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರವನ್ನು ಹನುಮನಿಗೇ ಮೀಸಲಿಡಲಾಗುವುದು ಎಂದಿದ್ದಾರೆ.

ಪ್ರತಿ ಮಂಗಳವಾರ ಗ್ರೇಟ್ ಕೈಲಾಶ್​ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ, ಸುಂದರಕಾಂಡದ ಅಧ್ಯಾಯಗಳ ಬೋಧನೆ, ಪಾರಾಯಣ, ಹನುಮ ಸ್ತೋತ್ರ ಪಠಣಗಳನ್ನು ನಡೆಸಲಾಗುವುದು. ಈ ಬಗ್ಗೆ ಏನೇ ಹೆಚ್ಚಿನ ಮಾಹಿತಿ ಬೇಕಾದರೂ ನನಗೆ ಕರೆ ಮಾಡಬಹುದು ಎಂದು ಸೌರಭ್​ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಹನುಮ ದೇವಾಲಯದಲ್ಲಿ ಅಪವಿತ್ರವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. (ಏಜೆನ್ಸೀಸ್​)