ನ್ಯೂಸ್

ಬಾಕ್ಸ್​​ ಆಫೀಸ್​ನಲ್ಲಿ ಸದ್ದು ಮಾಡದ 'ದಿ ವ್ಯಾಕ್ಸಿನ್​ ವಾರ್'; ಕಾರಣ ಹೀಗಿದೆ

ಮುಂಬೈ: 'ದಿ ಕಾಶ್ಮೀರ್​ ಫೈಲ್ಸ್​' ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ 'ದಿ ವ್ಯಾಕ್ಸಿನ್ ವಾರ್'​ ಇದೀಗ ಬಾಕ್ಸ್​ ಆಫೀಸ್​ನಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದು, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಕಳೆದ ವರ್ಷ ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಒಂದಾಗಿದ್ದ 'ದಿ ಕಾಶ್ಮೀರ್​ ಫೈಲ್ಸ್'​ ಚಿತ್ರದ ಮುಖೇನ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ, ಕುತೂಹಲವನ್ನು ಮೂಡಿಸಿದ್ದ ನಿರ್ದೇಶಕ ವಿವೇಕ್​​ ಅಗ್ನಿಹೋತ್ರಿ, ಇದೀಗ ಮತ್ತೊಂದು ಸಿನಿಮಾದ ಮೂಲಕ ಸಿನಿಪ್ರಿಯರ ಮುಂದೆ ಹಾಜರಾಗಿದ್ದಾರೆ.

ಕೋವಿಡ್​ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವ ವೇಳೆ ಎದುರಿಸಿದ ಸ್ಥಿತಿ-ಗತಿಗಳು 'ದಿ ವ್ಯಾಕ್ಸಿನ್​ ವಾರ್​' ಚಿತ್ರದ ಕಥಾಹಂದರವಾಗಿದ್ದು, ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಚಿತ್ರ ಬಾಕ್ಸ್​ ಆಫೀಸ್​ನ ಮೊದಲ ದಿನಕ್ಕೆ 1 ಕೋಟಿ ರೂ. ನಿವ್ವಳ ಗಳಿಸಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

ಈಗ ಎರಡನೇ ದಿನಕ್ಕೆ ಕಾಲಿಟ್ಟಿರುವ ಚಿತ್ರ ಇದೀಗ ಮತ್ತಷ್ಟು ಹಿನ್ನಡೆಯನ್ನು ಗಳಿಸಿದ್ದು, ಸಿನಿಪ್ರೇಕ್ಷಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆ ಪಡೆಯುವಲ್ಲಿ ಹಿಂದೆ ಸರಿಯುತ್ತಿದೆ ಎಂಬ ಸಂಗತಿ ಸದ್ಯ ಹಲವರಿಗೆ ಅಚ್ಚರಿ ಮೂಡಿಸಿದೆ.

ಚಿತ್ರಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಹೊಂದದ ಸಿನಿಮಾ, ಮುಂದಿನ ದಿನಗಳಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ? ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಅನುಪಮ್ ಖೇರ್, ಗಿರಿಕಾ ಓಕ್, ಸಪ್ತಮಿ ಗೌಡ, ನಿವೇದಿತಾ ಭಟ್ಟಾಚಾರ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).