ಬೆಂಗಳೂರು: ತಾಕತ್ತು ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ ಜಾರಿ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ಯಾರು ಅಡ್ಡ ಇದಾರೆ ನಿಮಗೆ ಎಂದು ಪ್ರಶ್ನಿಸಿದರು. 2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ? ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದರು. ನೇರವಾಗಿಯೇ ನಾನು ಬಿಜೆಪಿ ಜತೆ ಕೈ ಜೋಡಿಸಿದ್ದೇನೆ. ನಿಮ್ಮ ಹಾಗೆ ಹೊಂದಾಣಿಕೆ ರಾಜಕಾರಣ ಮಾಡಲ್ಲ. ಜನಪರ ತೀರ್ಮಾನಗಳು ಇದ್ದರೆ ನಾವು ಕೂಡ ಬೆಂಬಲ ಕೊಡುತ್ತೇವೆ. ಕಮೀಷನ್ ಹೊಡೆಯುವುದು ನಿಲ್ಲಿಸಿ ಕೆಲಸ ಮಾಡಿ ಎಂದು ಅವರು ಸಿದ್ದರಾಮಯ್ಯ ಮೇಲೆ ಹರಿಹಾಯ್ದರು.
ಒಂದು ಕುಡಿಯುವ ನೀರಿನ ಜಾಗಕ್ಕೆ ಹಸುವನ್ನು ಬಿಟ್ಟರೆ ಅದು ನೀರನ್ನೂ ಕುಡಿದು ಅದನ್ನು ಕಲಕದೇ ಹೋಗುತ್ತದೆ. ಆದರೆ ಅದೇ ಜಾಗಕ್ಕೆ ಕೋಣವನ್ನು ಬಿಟ್ಟರೆ ನೀರನ್ನು ಕುಡಿದು ಬೇರೆ ಯಾರೂ ಕುಡಿಯದ ರೀತಿ ಆ ನೀರನ್ನು ರಾಡಿ ಎಬ್ಬಿಸಿ ಹೋಗುತ್ತದೆ. ಕಾಂಗ್ರೆಸ್ ಕೋಣದ ರೀತಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಮಮಂದಿರ ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಸಿದ್ದರಾಮಯ್ಯ ಅವರ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.