ನ್ಯೂಸ್

ನಟ ವಿಜಯ್​ ಆಂಟೋನಿ ಮಗಳು ಸಾವು ಪ್ರಕರಣ: ಆಘಾತಕಾರಿ​ ಮಾಹಿತಿ ಬಿಚ್ಚಿಟ್ಟ ಖ್ಯಾತ ಮನೋವೈದ್ಯ

ಚೆನ್ನೈ: ಕಾಲಿವುಡ್​ನ ಖ್ಯಾತ ನಟ ಹಾಗೂ ಬಹುಮುಖ ಪ್ರತಿಭೆ ವಿಜಯ್​ ಆಂಟೋನಿ ಅವರ ಮಗಳು ಮೀರಾ 12ನೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಸಂಗತಿ ತಮಿಳು ಚಿತ್ರರಂಗ ಮಾತ್ರವಲ್ಲದೆ ಇಡೀ ತಮಿಳುನಾಡಿಗೆ ಆಘಾತ ಉಂಟು ಮಾಡಿತು. ಅದರಲ್ಲೂ ಮಕ್ಕಳಿರುವ ಪಾಲಕರಲ್ಲಿ ಆತಂಕವನ್ನು ಉಂಟುಮಾಡಿತು. ದೇಶಾದ್ಯಂತ ಮೀರಾ ಸಾವು ಭಾರೀ ಚರ್ಚೆಯನ್ನೇ ಹುಟ್ಟುಹಾಕಿತು. ಇದರ ನಡುವೆ ಖ್ಯಾತ ಮನೋವೈದ್ಯರೊಬ್ಬರು ಮೀರಾ ಸಾವಿಗೆ ಕಾರಣವಾಗಿರುವ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಅಂದಹಾಗೆ ವಿಜಯ್​ ಆಂಟೋನಿ ಬಹುಮುಖ ಪ್ರತಿಭೆ. ಏಕೆಂದರೆ, ಮ್ಯೂಸಿಕ್​ ಡೈರೆಕ್ಟರ್, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ​.

ವಲಂಡಿಲ್ ಪಲ್ತೆನೆ, ಡಿಸುಮೆ, ವೆಡೆತ್ತಕಾರನ್ ಮತ್ತು ಅಂಗಡಿತ್ ಸ್ಟ್ರೀಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾನ್​, ಕಲಿ, ಪಿಚೈಕಾರನ್​, ಸೈತಾನ್​, ಕೊಲೈಗಾರ, ವಿಜಯ್​ ರಾಘವನ್​, ಪಿಚೈಕಾರನ್​ 2 ಮತ್ತು ತಿಮಿರು ಪುಡಿಚವನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್​ 1 ಮತ್ತು 2ನ್ನು ವಿಜಯ್​ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್​ ಹಿಟ್​ ಆಯಿತು.

ವಿಜಯ್​ ಆಂಟೊನಿ ಅವರ ಕುಟುಂಬ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ನಿವಾಸದಲ್ಲಿ ವಾಸವಿದೆ. ಅವರ ಮಗಳು ಮೀರಾ ಚರ್ಚ್​ ಪಾರ್ಕ್​ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಇದೇ ತಿಂಗಳು 19ರಂದು ತಮ್ಮ ಮನೆಯಲ್ಲಿ ಬೆಳಗ್ಗೆ 3 ಗಂಟೆ ಸಮಯದಲ್ಲಿ ಮೀರಾ ಆತ್ಮಹತ್ಯೆ ಮಾಡಿಕೊಂಡಳು. ಇದು ಸಿನಿಮಾ ಇಂಡಸ್ಟ್ರಿಗೆ ಬಹು ದೊಡ್ಡ ಆಘಾತ ಉಂಟು ಮಾಡಿದೆ. ಆತ್ಮಹತ್ಯೆಗೆ ಒತ್ತಡವೇ ಕಾರಣ ಎಂದು ಹೇಳಲಾಗಿದೆ. ಓಮಂಡೂರರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೀರಾಳ ಅಂತ್ಯಸಂಸ್ಕಾರ ಮಾಡಲಾಯಿತು.

ಮೀರಾ ಸಾವಿನ ಬಗ್ಗೆ ಮಾನಸಿಕ ಆರೋಗ್ಯ ಸಲಹೆಗಾರರು ಮತ್ತು ವೈದ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಇದೀಗ ಪ್ರಖ್ಯಾತ ಮನೋವೈದ್ಯರೊಬ್ಬರು ಸಂದರ್ಶನವೊಂದರಲ್ಲಿ ಮೀರಾ ಸಾವಿಗೆ ನೀಡಿರುವ ಕಾರಣ ಭಾರೀ ವೈರಲ್​ ಆಗಿದೆ.

ಅನೇಕ ಬಾಲಕ-ಬಾಲಕಿಯರಿಗೆ ತಮ್ಮ ಮನೆಗಳಲ್ಲಿ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿದೆ. ಇದರಿಂದಾಗಿ ಅವರಿಗೆ ತಮ್ಮ ಕುಟುಂಬದವರ ಜತೆ ಮಾತನಾಡಲು ಅವಕಾಶವೇ ಸಿಗುತ್ತಿಲ್ಲ. ಪ್ರತಿದಿನ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆಯೇ ಅದೆಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಒತ್ತಡಕ್ಕೆ ದೂಡುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಬಿಡಬಾರದು. ವಿಜಯ್ ಆಂಟೋನಿ ಮಗಳ ವಿಚಾರದಲ್ಲೂ ಹೀಗೆ ನಡೆದಿದೆ ಎಂದು ಮನೋವೈದ್ಯರು ಹೇಳಿದ್ದಾರೆ. (ಏಜೆನ್ಸೀಸ್​)