ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಮೌಲ್ಯಾಧಾರಿತ ಶಿಕ್ಷಣದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಧಾರವಾಡದ ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಬಿ.ಸಿ.ಗೀತಾ, ಸುರೇಂದ್ರ, ಯಶವಂತ್ ಮೇನಕಾ, ಸುರೇಶ್ ಇದ್ದರು. 
ನ್ಯೂಸ್

ಮಾನವೀಯ ಮೌಲ್ಯಗಳನ್ನು ಅರಿಯುವುದೇ ನೈಜ ಶಿಕ್ಷಣ

ಶಿವಕುಮಾರ ಎಸ್.ಪಿ.

ಬಾಳೆಹೊನ್ನೂರು: ವಿದ್ಯಾರ್ಥಿಗಳು ಹಾಗೂ ಯುವಪೀಳಿಗೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಧಾರವಾಡದ ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಹೇಳಿದರು.

ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್‌ನಿಂದ ಸೋಮವಾರ ಆಯೋಜಿಸಿದ್ದ ಮೌಲ್ಯಾಧಾರಿತ ಶಿಕ್ಷಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯೆ ಕಲಿತು ವಿವೇಕಿಗಳಾಗಿ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಬೇಕು. ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹಾಗೂ ಎದುರಾಗುವ ಕಷ್ಟದ ಸಂದರ್ಭಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ನೀಡುತ್ತದೆ.
ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ. ಹಾಗಾಗಿ ಪ್ರತಿಯೊಬ್ಬರೂ ಮೌಲ್ಯಾಧಾರಿತ ಶಿಕ್ಷಣ ಪಡೆಯುವ ಅಗತ್ಯವಿದೆ. ಕೇವಲ ಅಂಕ ಗಳಿಕೆ ಉದ್ದೇಶ ಹೊಂದದೆ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಸುತ್ತಮುತ್ತಲಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಅರಿಯುವುದೇ ನಿಜವಾದ ಶಿಕ್ಷಣ. ಇಂದಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ. ಹೆಚ್ಚು ವಿಷಯಗಳನ್ನು ತಿಳಿದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ಶಿಕ್ಷಣವು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತದೆ. ನೈತಿಕ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಮೌಲ್ಯಾಧಾರಿತ ಶಿಕ್ಷಣ ಕಾರ್ಯಾಗಾರವನ್ನು ನಡೆಸುತ್ತಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಕಾರ್ಯದರ್ಶಿ ಯಶವಂತ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮೇನಕಾ ಜಯಪ್ರಕಾಶ್, ಕಾರ್ಯದರ್ಶಿ ಕಾಂಚನಾ, ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪ ಗೌಡ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಜೆ.ಎಂ.ಹರ್ಷ, ಸಾಕ್ಷರತಾ ಸಮಿತಿ ಜಿಲ್ಲಾ ಚೇರ್ಮನ್ ಎಚ್.ಎಂ.ಸುರೇಶ್, ಯೋಜನೆಯ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಪ್ರಸನ್ನ, ಉಪನ್ಯಾಸಕ ಸಿ.ವಿ.ಸುನಿಲ್ ಇದ್ದರು.