ನವದೆಹಲಿ: ಉತ್ತಮ ಫಲಿತಾಂಶ ಬಂದು, ಜನರಿಗೆ ಒಳಿತಾಗುತ್ತದೆ ಎನ್ನುವುದಾದರೆ ಕೋವಿಡ್-19 ಲಸಿಕೆ ತಯಾರಿಕೆಯ ವಿಷಯದಲ್ಲಿ ಚೀನಾ ಅಷ್ಟೇ ಏಕೆ, ವಿಶ್ವದ ಯಾವುದೇ ರಾಷ್ಟ್ರದೊಂದಿಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಭಾರತದೊಂದಿಗೆ ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗೆ ಮುನಿಸಿಕೊಂಡಿದ್ದರೂ, ಕೋವಿಡ್-19 ಲಸಿಕೆಗಾಗಿ ಚೀನಾದೊಂದಿಗೆ ಕೆಲಸ ಮಾಡಲು ಸಿದ್ಧವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಈ ಉತ್ತರ ನೀಡಿದ್ದಾರೆ.
ಚೀನಾದ ಕ್ಯಾನ್ಸೈನೋ ಬಯೊಲಾಜಿಕ್ಸ್ ಇಂಕ್ ಮತ್ತು ಚೀನಾದ ಮಿಲಿಟರಿ ಸಂಶೋಧನಾ ಘಟಕ ಸಿದ್ಧಪಡಿಸಿರುವ ಕೋವಿಡ್-19 ಲಸಿಕೆ ಮಧ್ಯಂತರ ಪರೀಕ್ಸೆಯಲ್ಲಿ ಸುರಕ್ಷಿತವಾಗಿದ್ದು, ಸಾಕಷ್ಟು ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿತು ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತದೆ.
ವಿಶ್ವದಲ್ಲಿ ನಾನಾ ರಾಷ್ಟ್ರಗಳಲ್ಲಿ ಸಿದ್ಧವಾಗುತ್ತಿರುವ ಲಸಿಕೆಗಳು ಆರಂಭಿಕ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೋರುತ್ತಿದ್ದು, ಭರವಸೆಯನ್ನು ಮೂಡಿಸುತ್ತಿವೆ. ಇವುಗಳ ಪೈಕಿ ಕ್ಯಾನ್ಸೈನೋ ಲಸಿಕೆ ಕುಡ ಒಂದಾಗಿದೆ. ಅಮೆರಿಕ ಮೂಲದ ಮಾಡೆರ್ನಾ ಮತ್ತು ಅಮೆರಿಕದ ಔಷಧ ಉತ್ಪಾದನಾ ಸಂಸ್ಥೆ ಪೈಜರ್ ಇಂಕ್ ಸಹಯೋಗದಲ್ಲಿ ಜರ್ಮನಿಯ ಬಯೋಎನ್ಟೆಕ್ ಎಸ್ಇ ಸಿದ್ಧಪಡಿಸಿರುವ ಲಸಿಕೆಗಳು ಕೂಡ ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ಗೆ ಸಜ್ಜಾಗಿವೆ.