ಮೈಸೂರು: ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಹಕಾರ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನದ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್‌ಗಳು ಮತ್ತು ಹೋಟೆಲ್ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅ.3 ರಂದು ಸಂಜೆ 8 ಗಂಟೆಗೆ ದಸರಾ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾನೆಗೊಳ್ಳಲಿದ್ದು, ಅಂದೇ ಸರ್ಕಾರದ ವಿವಿಧ ಇಲಾಖೆಗಳ 30ಸ್ಟಾಲ್ ಹಾಗೂ 153 ಖಾಸಗಿಸ್ಟಾಲ್ಗಳು ಉದ್ಘಾಟನೆಯಾಗಲಿವೆ. ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ.ಗಳಿದ್ದು, ವಯಸ್ಕರು ಹಾಗೂ ಇನ್ನಿತರರಿಗೆ 35 ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷಗಳಿಗಿಂತ ಈ ಬಾರಿಯ ದಸರಾ ವಸ್ತು ಪ್ರದರ್ಶನ ವಿಶೇಷವಾಗಿರಲಿದ್ದು, 90 ದಿನ ನಡೆಯುವ ಕಾರ್ಯಕ್ರಮದಲ್ಲಿ ಉತ್ಪನ್ನಗಳ ವೀಕ್ಷಣೆ ಮತ್ತು ಮಾರಾಟದ ಜತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನು ಸಾರ್ವಜನಿಕರು ಕಾಣಬಹುದಾಗಿದೆ. ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆ ನೀಡಲು ಇಂಟರಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಾಟರ್ ಕೌಂಟಿಂಗ್ ಪ್ಲಾಂಟ್:
ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏರ್ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರವನ್ನು ಹೆಚ್ಚಿಸಲಾಗಿದ್ದು, ಪ್ರಾಧಿಕಾರದ ಮುಖ್ಯದ್ವಾರ ಮುಂಭಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪ ಬಣ್ಣದ ದೀಪಾಲಂಕಾರಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
80 ಎಕ್ಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 3ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್‌ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್ ಇದ್ದರು.