ಸೊರಬ: ಮಕ್ಕಳ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಮಕ್ಕಳಿಗೆ ಓದುವ ಅಭಿಯಾನ ಜಾರಿಗೊಳಿಸಿದೆ ಎಂದು ಕತವಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಗಣೇಶ್ ಪಿ. ನಾಯ್ಕ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿ ಕತವಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಓದುವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಗೆ ಮಾರುಹೋಗುತ್ತಿದ್ದಾರೆ. ಇದರಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಜ್ಞಾನ ವೃದ್ಧಿಪಡಿಸಿಕೊಳ್ಳಲು ಓದುವ ಅಭಿಯಾನ ಸಹಕಾರಿಯಾಗಿದೆ ಎಂದರು.
ಕಥೆ, ಕಾದಂಬರಿ, ಸ್ವಾತಂತ್ರೃ ಹೋರಾಟಗಾರರ ಜೀವನ ಚರಿತ್ರೆ, ಸಾಮಾಜಿಕ, ಸಾಂಸ್ಕೃತಿಕ ವಿಷಯಗಳು ಇರುವಂತಹ ಪುಸ್ತಕಗಳನ್ನು ಮಕ್ಕಳು ಓದುವಂತೆ ಮಾಡಲು ಶಿಕ್ಷಣ ಇಲಾಖೆ ಓದುವ ಅಭಿಯಾನ ಅನುಷ್ಠಾನಗೊಳಿಸಿದೆ. ಶಾಲೆಗಳಲ್ಲಿ 21 ದಿನ ಓದುವ ಅಭಿಯಾನ ನಡೆಯಲಿದೆ ಎಂದರು. ಸಹಶಿಕ್ಷಕ ಎಸ್.ಲೋಕಪ್ಪ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.