ನ್ಯೂಸ್

ಹಿಂದೂಸ್ತಾನ್ ಇನ್ಫ್ರಾಕಾನ್ ಪ್ರೈ.ಲಿನಿಂದ ವಂಚನೆಗೆ ಒಳಗಾಗಿದ್ದರೇ ಈ ಸುದ್ದಿ ಓದಿ..!

ಬೆಂಗಳೂರು: ಅಧಿಕ ಬಡ್ಡಿ, ಕಮಿಷನ್ ಆಮಿಷವೊಡ್ಡಿ ಹೂಡಿಕೆದಾರರಿಗೆ ವಂಚಿಸಿದ ಹಿಂದೂಸ್ತಾನ್ ಇನ್ಫ್ರಾಕಾನ್ ಪ್ರೈ.ಲಿ.ಗೆ ಸೇರಿದ 71.48 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.

ಬೆಂಗಳೂರು, ಮೈಸೂರು ಮತ್ತು ಆಂಧ್ರಪ್ರದೇಶದಲ್ಲಿ ಕೃಷಿಯೇತರ ಜಮೀನು, ವಸತಿ ಸೇರಿ 71.48 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಇನ್ಫ್ರಾಕಾನ್ ಇಂಡಿಯಾ ಪ್ರೈ. ಲಿ. ನಿರ್ದೇಶಕರು ಸಾಮಾನ್ಯ ಜನರಿಗೆ ಹೂಡಿಕೆ ಮೇಲೆ ಅಧಿಕ ಲಾಭ, ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿ 7,18,817 ಜನರಿಂದ 389 ಕೋಟಿ ರೂ. ಸಂಗ್ರಹಿಸಿದ್ದರು. ಹೂಡಿಕೆದಾರರಿಗೆ ಭರವಸೆ ನೀಡದಂತೆ ಲಾಭಾಂಶ ಕೊಡುವಲ್ಲಿ ವಿಲರಾಗಿದ್ದರು. ಕೇವಲ 199 ಕೋಟಿ ರೂ. ಜನರಿಗೆ ವಾಪಸ್ ನೀಡಿದ್ದರು. ಈ ಸಂಬಂಧ ರಾಜ್ಯದ ವಿವಿಧೆಡೆ ಪ್ರಕರಣ ದಾಖಲಾಗಿದ್ದವು.

ಅಕ್ರಮ ಹಣ ವಹಿವಾಟು ಆರೋಪದ ಮೇಲೆ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಾಗ ಹಿಂದೂಸ್ತಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿ ಹಣವನ್ನು ಬೇರೆಡೆಗೆ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಭಾರತ್ ಬಿಲ್ಡರ್ಸ್, ಹಿಂದೂಸ್ತಾನ್ ಮೆಗಾ ಪ್ರೈ.ಲಿ. ಕಂಪನಿ, ಲಲಿತಾ ಮತ್ತು ವಜ್ರ ಪ್ರಾಪರ್ಟಿಸ್‌ಗೆ ಹಣ ವರ್ಗಾವಣೆ ಮಾಡಿ ಅಲ್ಲಿಂದ ಆಸ್ತಿಯನ್ನು ಖರೀದಿ ಮಾಡಿದ್ದರು. ಅಲ್ಲದೆ, ನಗದು ರೂಪದಲ್ಲಿ ಹಿಂಪಡೆದು ವೈಯಕ್ತಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.