ನ್ಯೂಸ್

ನರೇಗಾ ಅಕ್ರಮ ತನಿಖೆಗೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ| Misused amount recovered

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮಗಳ ಬಗ್ಗೆ ನಿರ್ದಿಷ್ಟವಾಗಿ ದೂರಿತ್ತರೆ ವಿಶೇಷ ತನಿಖೆಗೆ ಸಿದ್ಧವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ದೃಢ ನಿಲುವು ವ್ಯಕ್ತಪಡಿಸಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಮತ್ತು 15ನೇ ಹಣಕಾಸು ಆಯೋಗ ಅನುದಾನವು ಅನುದಾನಿತ ಕ್ರಿಯಾ ಯೋಜನೆಯಂತೆ ನೇರವಾಗಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ.

ಅಧಿಕಾರ ವಿಕೇಂದ್ರೀಕರಣವೆಂದರೆ ಇದೇ ತಾನೆ. ಅನುದಾನ ಬಿಡುಗಡೆ, ಬಳಕೆಗೆ ನಿಯಮಾವಳಿಗಳ ಬಗ್ಗೆ ಗೊತ್ತಿಲ್ಲದೆ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ನನ್ನ ಮೇಲೆ ಆರೋಪಿಸಿದ್ದಾರೆ. ಪ್ರತಿ ಮಾಸಿಕ ನನ್ನ ಅಧ್ಯಕ್ಷತೆಯಲ್ಲಿ ನರೇಗಾ ಸೋಷಿಯಲ್ ಆಡಿಟ್ ಸಭೆಗಳಾಗುತ್ತವೆ, ಕ್ರಮಕೈಗೆಂಡ ಕ್ರಮಗಳನ್ನು ಪರಿಶೀಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ದುರ್ಬಳಕೆ ಹಣ ವಸೂಲಿ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯದು ಸೇರಿ 2017 ರಿಂದ 2023ರವರೆಗೆ ಸೋಷಿಯಲ್ ಆಡಿಟ್‌ನಲ್ಲಿ 75,637 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 53,474 ಪ್ರಕರಣಗಳನ್ನು ಇತ್ಯರ್ಥ ಮಾಡಿ 24 ಕೋಟಿ ರೂ. ವಸೂಲಿ ಮಾಡಲಾಗಿದೆ.

ಸೋಷಿಯಲ್ ಆಡಿಟ್ ವರದಿ ಪ್ರಕಾರ ದೇವದುರ್ಗ ತಾಲೂಕಿನ ಪಿಡಿಒಗಳ ವಿರುದ್ಧ ಬಿಜೆಪಿ ಸರ್ಕಾರ ಯಾವುದೇ ಕ್ರಮವಹಿಸಿದ್ದಿಲ್ಲ. ನಾನು ಸಚಿವನಾದ ಮೇಲೆ ಈ ವರದಿ ಗಮನಿಸಿ 40 ಪಿಡಿಒಗಳನ್ನು ಅಮಾನತು ಮಾಡಿದ್ದು, ಬಿಜೆಪಿ ಅವಧಿಯ ಸಚಿವರು ವಿರುದ್ಧ ನಾನು ಆರೋಪಿಸುವುದ ಸುಲಭ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ನಡೆದ ಸೋಷಿಯಲ್ ಆಡಿಟ್‌ನಲ್ಲಿ 47,458 ಪ್ರಕರಣಗಳು ದಾಖಲಾಗಿವೆ. 43,849 ಪ್ರಕರಣಗಳನ್ನು ಇತ್ಯರ್ಥಪಡಿಸಿ 18 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಜವಾಬ್ದಾರಿ ನಿರ್ವಹಣೆ

ಹೈಕಮಾಂಡ್ ನಾಯಕರು, ಸಿಎಂ, ಕೆಪಿಸಿಸಿ ಅಧ್ಯಕ್ಷರು ಹೇಳಿದ್ದರೆ ಮಹತ್ವವಿರುತ್ತದೆ. ನಾಯಕತ್ವ ಬದಲಾವಣೆ, ಶಾಸಕರ ಅಭಿಪ್ರಾಯ ಸಂಗ್ರಹ ಕುರಿತು ಬೇರೆ ಯಾರು ಏನೇ ಹೇಳಿದರೂ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ತಮ್ಮ ಜವಾಬ್ದಾರಿ ನಿರ್ವಹಿಸಿದ್ದು, ಸಚಿವರಿಂದಲೂ ಪ್ರಗತಿ ವರದಿ ಕೇಳಿದ್ದರು. ಶಾಸಕರಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಎಲ್ಲಿಲ್ಲದ ಪ್ರೀತಿ

ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೇಡಿಕೆ ಕುಸಿದಾಗ ಕಂಪನಿಗಳು ಖ್ಯಾತನಾಮರನ್ನು ಬಳಸಿ ವಿಪರೀತ ಜಾಹೀರಾತು ಕೊಡುತ್ತವೆ. ಹಾಗೆಯೇ ಬಿಜೆಪಿಯಲ್ಲಿನ ಕಳಪೆ ಪ್ರೊಡಕ್ಟ್‌ಗಳಿಗೆ ನಾನೇ ಬ್ರ್ಯಾಂಡ್ ಅಂಬಾಸಿಡರ್ ಎಂದು ಅಣಕವಾಡಿದರು.

ಆರ್.ಅಶೋಕ್, ಛಲವಾದಿ, ಪ್ರತಾಪಸಿಂಹ ಮತ್ತೂ ಕೆಲವು ನಾಯಕರಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ. ನಟ ಉಪೇಂದ್ರ ಅವರ ‘ಪ್ರೀತ್ಸೆ’ ಸಿನಿಮಾದಲ್ಲಿ ಒಂದು ಡೈಲಾರ್ ಬರುತ್ತದಲ್ಲ, ಐ ಲವ್ ಯೂ, ಯು ಮಸ್ಟ್ ಲವ್’ ಹಾಗೆಯೇ ಇದು.

ಪ್ರತಿಯೊಂದಕ್ಕೂ ಬಿಜೆಪಿ ನಾಯಕರು ನನಗೆ ತಳುಕು ಹಾಕುತ್ತಾರೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಬೇರೆ ಏನೇನೋ ಹೇಳುತ್ತಾರೆ. ವಿಷಯ ಮರೆಮಾಚುವರು ಇಲ್ಲವೇ ನನ್ನ ವಿದ್ಯಾಭ್ಯಾಸದ ಬಗ್ಗೆ ಹಂಗಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಛೇಡಿಸಿದರು.