ಬದಲಾವಣೆ ಹೆಸರಿನಲ್ಲಿ ಪ್ರತಿಗಾಮಿ ನಡೆ
(ಲೇಖಕರು ರಾಜ್ಯ ಬಿಜೆಪಿ ವಕ್ತಾರ)
ಈ ನಿರ್ಧಾರದ ಸುತ್ತ ಎದ್ದಿರುವ ವಿವಾದ, ಅದರ ಹಿಂದಿನ ರಾಜಕೀಯ ಉದ್ದೇಶಗಳು ಮತ್ತು ಇದರಿಂದ ಪ್ರಜಾಪ್ರಭುತ್ವದ ಮೇಲಾಗುವ ಪರಿಣಾಮಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ನಿರ್ಧಾರ ಪ್ರಕಟವಾದ ತಕ್ಷಣ ಎದ್ದ ಪ್ರಶ್ನೆ, ಇದು ಸರ್ಕಾರದ ಒತ್ತಡವೇ? ಎನ್ನುವುದು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಆಯುಕ್ತರು, ‘ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ನಾವು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ಮತಪತ್ರದ ಮೂಲಕ ಚುನಾವಣೆ ನಡೆಸುವ ನಿರ್ಧಾರ ನಮ್ಮದೇ ಹೊರತು, ಇದರ ಹಿಂದೆ ಸರ್ಕಾರದ ಯಾವುದೇ ಒತ್ತಡವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ವಾಸ್ತವದ ಸಂಗತಿಗಳನ್ನು ಜೋಡಿಸಿ ನೋಡಿದಾಗ ಈ ಹೇಳಿಕೆ ಮೇಲೆ ಸಂಶಯ ಮೂಡುತ್ತದೆ. 2025ರ ಸೆಪ್ಟೆಂಬರ್ನಲ್ಲಿ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ, ಮುಂದಿನ ಚುನಾವಣೆಗಳನ್ನು ಮತಪತ್ರದಲ್ಲಿ ನಡೆಸಲು ಕಾನೂನು ತಿದ್ದುಪಡಿ ತರುವ ತೀರ್ಮಾನ ಕೈಗೊಂಡಿತ್ತು. ಈ ತೀರ್ವನವನ್ನು ಚುನಾವಣಾ ಆಯೋಗಕ್ಕೆ ಮುಟ್ಟಿಸುವುದಾಗಿ ತಿಳಿದುಬಂದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಆಯೋಗವೂ ಅದೇ ರಾಗ ಹಾಡುತ್ತಿದೆ. ಜೊತೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿರಂತರವಾಗಿ ಇವಿಎಂ ವೋಟ್ ಚೋರಿ ಆರೋಪ ಮಾಡುತ್ತಿರುವುದು, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಒಟ್ಟಿನಲ್ಲಿ ಮತದಾನ ಆದರೆ ಸಾಕಲ್ಲವೇ?’ ಎಂದು ಸಮರ್ಥಿಸಿಕೊಂಡಿರುವುದನ್ನು ನೋಡಿದರೆ, ಸ್ವಾಯತ್ತ ಸಂಸ್ಥೆಯೊಂದು ಪರೋಕ್ಷವಾಗಿ ಆಡಳಿತಾರೂಢರ ಇಚ್ಛೆಗೆ ತಲೆಬಾಗಿದೆಯೇ ಎಂಬ ಅನುಮಾನ ಮೂಡುವುದು ಸಹಜ.
ಹಿಂದೆ ಮತಪತ್ರಗಳಿದ್ದ ಕಾಲದಲ್ಲಿ, ಶೇ. 2ರಿಂದ ಶೇ. 4ರಷ್ಟು ಮತಗಳು ಅಸಿಂಧು ಎಂದು ತಿರಸ್ಕೃತವಾಗುತ್ತಿದ್ದವು. 1999ರ ಲೋಕಸಭಾ ಚುನಾವಣೆಯಲ್ಲಿ (ಇವಿಎಂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ಮುನ್ನ) ದೇಶಾದ್ಯಂತ ಲಕ್ಷಾಂತರ ಮತಗಳು ಅಸಿಂಧುವಾಗಿದ್ದವು. ಇವಿಎಂ ಬಂದ ನಂತರ ಅಸಿಂಧು ಮತಗಳ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಗುಂಡಿ ಒತ್ತಿದರೆ ಸಾಕು, ಮತ ದಾಖಲಾಗುತ್ತದೆ. ದಿನಗಟ್ಟಲೆ ಕಾಯಬೇಕಾಗುತ್ತಿದ್ದ ಫಲಿತಾಂಶ ಇವಿಎಂ ಕಾರಣಕ್ಕೆ ಕೆಲವೇ ಗಂಟೆಗಳಲ್ಲಿ ಲಭಿಸುತ್ತದೆ.
ಇವಿಎಂ ಪಾರದರ್ಶಕತೆಯ ಬಗ್ಗೆ ಈಗಾಗಲೇ ದೇಶದ ಸವೋಚ್ಚ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದೆ. ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಮತ್ತು ಮತ್ತೆ ಬ್ಯಾಲೆಟ್ ಪೇಪರ್ಗೆ ಮರಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು (ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾಮ್್ಸರ್ ವರ್ಸಸ್ ಇಸಿಐ ಕೇಸ್- ಏಪ್ರಿಲ್ 2024) ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತೀರ್ಪು ನೀಡುವಾಗ ಹೇಳಿದ ಮಾತು ಅತ್ಯಂತ ಮಹತ್ವದ್ದು- ‘ಮತಪತ್ರದ ಯುಗದಲ್ಲಿ ಏನೆಲ್ಲಾ ಆಗುತ್ತಿತ್ತು ಎಂಬುದನ್ನು ನಾವು ಮರೆತಿಲ್ಲ. ಮತ್ತೆ ಆ ಯುಗಕ್ಕೆ ಮರಳಲು ಸಾಧ್ಯವಿಲ್ಲ’.
ಪ್ರತಿಗಾಮಿ ನಡೆ: ಹೌದು. ಇವಿಎಂ ಆಗಮಿಸಿದ ಹೊಸತರಲ್ಲಿ ಅನೇಕ ರಾಜಕೀಯ ನಾಯಕರಲ್ಲಿ ಅನುಮಾನಗಳಿದ್ದದ್ದು ಸತ್ಯ. ಇದೀಗ ಯಾರ್ಯಾರು ಇವಿಎಂ ಸಮರ್ಥಿಸುತ್ತಿದ್ದಾರೆಯೋ ಅವರೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಯಾವಾಗ ಚುನಾವಣಾ ಆಯೋಗ ಹಾಗೂ ಇವಿಎಂ ತಯಾರಿಸುವ ಸಂಸ್ಥೆಗಳು ಸಾಕಷ್ಟು ಪರಿಶ್ರಮ ಹಾಕಿ ಆ ಅನುಮಾನಗಳನ್ನು ನಿವಾರಿಸಿದವೋ ಅಂದಿನಿಂದ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಂಡಿದ್ದಾರೆ. ಏಕೆಂದರೆ ಈ ಅನುಮಾನಗಳು ಪ್ರಾಮಾಣಿಕವಾಗಿದ್ದವು. ಆದರೆ ಕಾಂಗ್ರೆಸ್ ನಾಯಕರು ಇವಿಎಂ ಕುರಿತು ವ್ಯಕ್ತಪಡಿಸುತ್ತಿರುವ ಅನುಮಾನಗಳಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಇವಿಎಂ ಪಾರದರ್ಶಕತೆಯನ್ನು ಜನರಿಗೆ ಮನದಟ್ಟು ಮಾಡಲು ವಿವಿಪ್ಯಾಟ್ ಸೇರಿದಂತೆ ಅನೇಕ ರಕ್ಷಾಕವಚಗಳಿದ್ದರೂ, ಸುಪ್ರೀಂ ಕೋರ್ಟ್ನ ತೀರ್ಪನ್ನೂ ಲೆಕ್ಕಿಸದೆ, ವೈಜ್ಞಾನಿಕ ಕಾರಣ ನೀಡದೆ ಹಳೆಯ ಪದ್ಧತಿಗೆ ಮರಳುವುದು ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಒಂದು ಸುಳ್ಳನ್ನು ಪದೇಪದೆ ಹೇಳುವ ಮೂಲಕ, ಜನರಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹುಟ್ಟಿಸಿ, ಕೊನೆಗೆ ಅದನ್ನೇ ಸತ್ಯವೆಂದು ನಂಬಿಸುವ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಮತಪತ್ರದ ಯುಗದಲ್ಲಿ ತೋಳ್ಬಲ ಬಳಸಿ ಮತಗಟ್ಟೆ ವಶಪಡಿಸಿಕೊಳ್ಳುವುದು ಮತ್ತು ಮತಪೆಟ್ಟಿಗೆ ಕದಿಯುವುದು ಇದೇ ಕಾಂಗ್ರೆಸ್ ಆಡಳಿತದ ಕರಾಳ ನೆನಪುಗಳು. ಈ ಅಕ್ರಮಗಳಿಗೆ ಇವಿಎಂ ಕಡಿವಾಣ ಹಾಕಿದೆ.
ಇವಿಎಂನಿಂದ ಮತಪತ್ರಕ್ಕೆ ಬದಲಾವಣೆ ಆಗುವುದು ಎನ್ನುವುದನ್ನು ಮಾತ್ರ ನೋಡಿದರೆ ಅಂತಹ ಮಹಾ ಅಪರಾಧವೇನೂ ಆಗದಿರಬಹುದು. ಆದರೆ ಹೀಗೆ, ಯಾವುದೇ ಸಾಕ್ಷ್ಯಾಧಾರ, ನಿರೂಪಣೆ ಇಲ್ಲದೆ ಹಿಂದಿನ ವ್ಯವಸ್ಥೆಗೆ ಸಮಾಜವನ್ನು ಬದಲಾಯಿಸುವ ಸಾಮರ್ಥ್ಯದ ಕುರಿತು ಆತಂಕ ಪಡಬೇಕಾಗಿದೆ. ವೋಟ್ ಚೋರಿ ಎಂಬ ಊಹಾತ್ಮಕ ಕಾರಣವನ್ನು ಮುಂದಿಟ್ಟುಕೊಂಡು, ನ್ಯಾಯಾಲಯದ ತೀರ್ಪಿಗೂ ಬೆಲೆ ಕೊಡದೆ, ಅಸಿಂಧು ಮತಗಳ ಮೂಲಕ ಜನರ ಹಕ್ಕನ್ನು ಕಸಿದುಕೊಳ್ಳುವ ಹಳೆಯ ವ್ಯವಸ್ಥೆಗೆ ಜಾರುತ್ತಿರುವುದು ಕಾಂಗ್ರೆಸ್ನ ಪ್ರತಿಗಾಮಿ ಮಾನಸಿಕತೆಯನ್ನು ತೋರಿಸುತ್ತದೆ. ತಾನು ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ತರುತ್ತೇನೆ ಎಂದು ಹೇಳಿ, ಜನರನ್ನು ಭ್ರಮೆಗೊಳಿಸಿ ಹಿಂದಕ್ಕೆ ಕರೆದೊಯ್ಯುವ ಈ ನಡೆಯ ಬಗ್ಗೆ ರಾಜ್ಯ ಮತ್ತು ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಇಲ್ಲಿ ವಿಷಯ ಕೇವಲ ಒಂದು ಯಂತ್ರದ ಬದಲಾವಣೆಯಲ್ಲ; ಇದು ಆಡಳಿತ ನಡೆಸುವವರ ಮನಸ್ಥಿತಿಯ ಸಂಕೇತ. ಅಭಿವೃದ್ಧಿಪರ ಎಂದು ಹೇಳಿಕೊಳ್ಳುವ ನಾಯಕರು, ಅಪ್ರಸ್ತುತವಾದ ಮತ್ತು ಕಾಲಹರಣ ಮಾಡುವ ಪದ್ಧತಿಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಇವಿಎಂ ದೋಷಪೂರಿತ ಎಂದು ಸಾಬೀತುಪಡಿಸದೆ, ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ತಮ್ಮ ಸೋಲಿನ ಭೀತಿಯನ್ನು ಮರೆಮಾಚಲು ಹಳೆಯ ಪದ್ಧತಿಗೆ ಜೋತುಬೀಳುವುದು ಎಷ್ಟು ಸರಿ?
ರಾಜ್ಯದ ಮತ್ತು ದೇಶದ ಜನತೆ ಇಂತಹ ಪ್ರತಿಗಾಮಿ ನಡೆಗಳ ಬಗ್ಗೆ ಜಾಗೃತರಾಗಬೇಕಿದೆ. ಕಾಂಗ್ರೆಸ್ ನಾಯಕರು ಅಥವಾ ಯಾವುದೇ ಪಕ್ಷದ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವದ ಮೂಲಭೂತ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡುವುದನ್ನು ಪ್ರಶ್ನಿಸಬೇಕಿದೆ. ಇಲ್ಲದಿದ್ದರೆ, ನಾವು ತಂತ್ರಜ್ಞಾನದ ಯುಗದಲ್ಲಿದ್ದರೂ, ನಮ್ಮ ವ್ಯವಸ್ಥೆಗಳು ಮಾತ್ರ ಶಿಲಾಯುಗದತ್ತ ಸಾಗುವುದರಲ್ಲಿ ಸಂಶಯವಿಲ್ಲ.