ನ್ಯೂಸ್

ಪ್ರೇಮಿಗಳ ಸಿನಿಮಾ ದಿನ; ಹಳೆಯ ರೊಮ್ಯಾಂಟಿಕ್ ಸಿನಿಮಾಗಳು ರೀರಿಲೀಸ್

ಆಗೊಮ್ಮೆ ಈಗೊಮ್ಮೆ ಹಳೆಯ ಕ್ಲಾಸಿಕ್ ಸಿನಿಮಾಗಳು, ಹೊಸ ರೂಪ ಪಡೆದ ಕಪು್ಪ-ಬಿಳುಪು ಚಿತ್ರಗಳನ್ನು ರೀರಿಲೀಸ್ ಮಾಡುವುದು ಸಾಮಾನ್ಯ. ಆದರೆ, ಕಳೆದ ಮೂರು ವರ್ಷಗಳಿಂದ ಕರೋನಾ ಲಾಕ್​ಡೌನ್​ನಿಂದಾಗಿ ಹೊಸ ಚಿತ್ರಗಳೇ ಬಿಡುಗಡೆಯಾಗುವುದು ಕಷ್ಟವಾಗಿತ್ತು. ಹೀಗಾಗಿ ಹಳೆಯ ಚಿತ್ರಗಳ ಮರುಬಿಡುಗಡೆಗೆ ಬ್ರೇಕ್ ಹಾಕಲಾಗಿತ್ತು. ಆದರೆ, ಈ ಬಾರಿಯ ಪ್ರೇಮಿಗಳ ದಿನದಂದು ಮತ್ತೊಮ್ಮೆ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಹಳೆಯ ಹಿಟ್ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

1995ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್, ಕಾಜೊಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ’, ಅದೇ ವರ್ಷ ತೆರೆಗೆ ಬಂದಿದ್ದ ಮಾಲಿವುಡ್ ಸಿನಿಮಾ ಮೋಹನ್ ಲಾಲ್ ನಟಿಸಿದ್ದ ‘ಸ್ಪಡಿಕಾಮ್, 1997ರಲ್ಲಿ ಬಿಡುಗಡೆಯಾಗಿದ್ದ ಲಿಯೋನಾರ್ಡೆ ಡಿಕಾಪ್ರಿಯೊ, ಕೇಟ್ ವಿನ್ಸ್​ಲೆಟ್ ನಟಿಸಿದ್ದ ಹಾಲಿವುಡ್ ಚಿತ್ರ ‘ಟೈಟಾನಿಕ್’, 2007ರಲ್ಲಿ ಬಿಡುಗಡೆಯಾಗಿದ್ದ ಶಾಹಿದ್ ಕಪೂರ್, ಕರೀನಾ ಕಪೂರ್ ಅಭಿನಯದ ‘ಜಬ್ ವಿ ಮೆಟ್’, 2015ರಲ್ಲಿ ರಿಲೀಸ್ ಆಗಿದ್ದ ಮತ್ತೊಂದು ಬಾಲಿವುಡ್ ಚಿತ್ರ ‘ತಮಾಷಾ’ ಹಾಗೂ 2011ರಲ್ಲಿ ತೆರೆಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಮೊದಲ ಚಿತ್ರ ‘ಲೈಫು ಇಷ್ಟೇನೆ’ ಚಿತ್ರ ಪ್ರೇಮಿಗಳ ವಾರದ ಅಂಗವಾಗಿ ಈ ವಾರ ಮರುಬಿಡುಗಡೆ ಆಗಿವೆ. ಕೆಲವು ಶುಕ್ರವಾರದಿಂದಲೇ ಪ್ರದರ್ಶನ ಆರಂಭಿಸಿದ್ದು, ಕೆಲ ಚಿತ್ರಗಳು ವಾರಾಂತ್ಯದಲ್ಲಿ ಶೋಗಳನ್ನು ಆಯೋಜಿಸಿವೆ. -ಏಜೆನ್ಸೀಸ್