ನ್ಯೂಸ್

ಬೆರಳ ತುದಿಯಲ್ಲೇ ಸಿಗಲಿದೆ ಆರೋಗ್ಯ ಸೇವೆ-ಸೌಲಭ್ಯ: ಆರೋಗ್ಯ ಭಾರತ ಹೆಲ್ತ್ ಅಕೌಂಟ್ ಮರುನಾಮಕರಣ..

ನವದೆಹಲಿ: ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಆರಂಭಿಸಲಾಗಿರುವ ವಿಶಿಷ್ಟ ಆರೋಗ್ಯ ಖಾತೆಗೆ ‘ಆರೋಗ್ಯ ಭಾರತ ಹೆಲ್ತ್ ಅಕೌಂಟ್’ (ಎಬಿಎಚ್​ಎ) ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಲದ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ (ಎಬಿಡಿಎಂ) ಅಧೀನದ ಎಬಿಎಚ್​ಎ ಉಪಕ್ರಮದಲ್ಲಿ ಭಾಗಿಯಾಗುವಂತೆ ದೇಶವಾಸಿಗಳನ್ನು ಉತ್ತೇಜಿಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದೆ. ಪ್ರತಿಯೊಬ್ಬ ಭಾರತೀಯನೂ ಡಿಜಿಟಲ್ ಹೆಲ್ತ್ ರೆಕಾರ್ಡ್ ಖಾತೆ ರಚಿಸಬೇಕು ಮತ್ತು ಅದನ್ನು ನಿರ್ವಹಿಸಬೇಕು. ಹೀಗಾಗಿ ‘ಎಬಿಎಚ್​ಎ’ ಎಂದು ಮರುನಾಮಕರಣ ಮಾಡಿ ಅದನ್ನು ಸಾಮಾನ್ಯ ಜನರಿಗೆ ಹತ್ತಿರುವಾಗುವಂತೆ ಮಾಡುವುದು ಸರ್ಕಾರದ ಉದ್ದೇಶ.

15 ಕೋಟಿ ಹೆಲ್ತ್ ಐಡಿ: ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು 2020ರ ಆಗಸ್ಟ್ 15ರಂದು ಘೋಷಣೆ ಮಾಡಿದರು. ಕಳೆದ ವರ್ಷ ಸೆಪ್ಟೆಂಬರ್ 27ರಂದು ಇದನ್ನು ಜಾರಿಗೊಳಿಸಲಾಗಿದೆ. ಜನವರಿ 6ರ ತನಕ 15 ಕೋಟಿ ಹೆಲ್ತ್ ಐಡಿ ರಚನೆಯಾಗಿದೆ. 15,000ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳು ಈ ವ್ಯವಸ್ಥೆಯ ಒಳಗೆ ಬಂದಿವೆ. 7,400 ಡಾಕ್ಟರ್ಸ್ ಸೇರ್ಪಡೆ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಆರೋಗ್ಯ ದಾಖಲೆ ಆಪ್​ಗಳು ಇದುವರೆಗೆ ಡೌನ್​ಲೋಡ್ ಆಗಿವೆ.

ಎಬಿಎಚ್​ಎ ವೈಶಿಷ್ಟ್ಯ
  • ಡಿಜಿಟಲ್ ಹೆಲ್ತ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ 14 ಅಂಕಿಯ ಡಿಜಿಟಲ್ ಹೆಲ್ತ್ ಐಡಿ ಸಿಗಲಿದೆ. ಇದು ಯೂನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಮಾಡಿದ ಅದೇ ರೀತಿಯ ಕ್ರಾಂತಿಯನ್ನು ಎಬಿಎಚ್​ಎ ಕೂಡ ಮಾಡಲಿದೆ.
  • ಪೌರರು ತಮ್ಮ ಬೆರಳ ತುದಿಯಿಂದ ಒಂದು ಕ್ಲಿಕ್ ಮಾಡಿದರೆ ಸಾಕು ಆರೋಗ್ಯ ಸೇವೆ, ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಷ್ಟೇ ಅಲ್ಲ, ಅನಾರೋಗ್ಯ ತಡೆಯುವುದಕ್ಕೂ ಈ ದಾಖಲೆಗಳು ನೆರವು ನೀಡಲಿವೆ.
ಎಬಿಡಿಎಂ ವಿಶೇಷ
  • ದೇಶಾದ್ಯಂತ ಡಿಜಿಟಲ್ ಹೆಲ್ತ್ ಸಲ್ಯೂಷನ್ಸ್ ಅನ್ನು ಜೋಡಿಸುವ ಕೆಲಸವನ್ನು ಎಬಿಡಿಎಂ ಮಾಡಲಿದೆ. ಡಿಜಿಟೈಸೇಷನ್ ಮೂಲಕ ಹೆಲ್ತ್​ಕೇರ್ ಸುಲಭ, ಸರಳವಾಗಲಿದೆ.
  • ಎಲ್ಲ ಭಾರತೀಯರಿಗೂ ಡಿಜಿಟಲ್ ಹೆಲ್ತ್ ಐಡಿ ಸಿಗಲಿದ್ದು, ಅದರ ಮೂಲಕ ಅವರ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ಆಗಿ ಸುರಕ್ಷಿತವಾಗಿರಿಸಿಕೊಳ್ಳಬಹುದು.
  • ಹೆಲ್ತ್ ಐಡಿ ಬಳಸಿಕೊಂಡು ಪ್ರತಿ ಪೌರನೂ ಅವರ ಆರೋಗ್ಯ ಖಾತೆಗೆ ಲಾಗಿನ್ ಆಗಿ ಅವರ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಆಪ್ ಮೂಲಕವೇ ವೀಕ್ಷಿಸಬಹುದು, ಪರಿಶೀಲಿಸಬಹುದು.
  • ಬಡ, ಮಧ್ಯ ವರ್ಗದಲ್ಲಿ ವೈದ್ಯ ಚಿಕಿತ್ಸೆ ಪಡೆ ಯುವಲ್ಲಿ ಇರುವ ಸಮಸ್ಯೆ ನಿವಾರಣೆ ಮಾಡುವಲ್ಲಿ ಎಬಿಡಿಎಂ ಪಾತ್ರ ನಿರ್ವಹಿಸಲಿದೆ.

ಪ್ರಮುಖ 3 ಘಟಕಗಳು

  1. ಹೆಲ್ತ್ ಐಡಿ: ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಹೆಲ್ತ್ ಐಡಿ ಸಿಗಲಿದೆ. ಇದು ಅವರ ಆರೋಗ್ಯದ ಖಾತೆ ಆಗಿರಲಿದೆ. ಮೊಬೈಲ್ ಆಪ್ ಮೂಲಕ ಅವರ ಆರೋಗ್ಯ ದಾಖಲೆಗಳು ಈ ಐಡಿ ಮೂಲಕ ಎಲ್ಲಿದ್ದರೂ ಲಭ್ಯವಾಗಲಿದೆ.
  2. ಹೆಲ್ತ್​ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (ಎಚ್​ಪಿಆರ್): ಆರೋಗ್ಯ ಕ್ಷೇತ್ರದ ವೃತ್ತಿಪರರ ರಿಜಿಸ್ಟ್ರಿ ಇದಾಗಿದ್ದು, ಎಲ್ಲರ ವಿವರಗಳು ಇದರಲ್ಲಿ ಸಿಗಲಿದೆ. ಇದು ಡಿಜಿಟಲ್ ಆರೋಗ್ಯ ಮೂಲಸೌಕರ್ಯದ ಬಲವನ್ನು ವೃದ್ಧಿಸಲಿದೆ.
  3. ಹೆಲ್ತ್​ಕೇರ್ ಫೆಸಿಲಿಟೀಸ್ ರಿಜಿಸ್ಟ್ರೀಸ್ (ಎಚ್​ಎಫ್​ಆರ್): ಆರೋಗ್ಯ ಕ್ಷೇತ್ರದ ಎಲ್ಲ ಆರೋಗ್ಯ ಸೇವಾ ಪೂರೈಕೆದಾರರ ಸೌಲಭ್ಯಗಳ ದಾಖಲೆ ಇದು. ಈ ರಿಜಿಸ್ಟ್ರೀಸ್​ನಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯ ವ್ಯವಸ್ಥೆಯ ವಿವರಗಳು ಇರಲಿವೆ.