ನ್ಯೂಸ್

ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ: ಆರ್‌ಸಿಬಿ ಕಾಲ್ತುಳಿತ ಪ್ರಕರದ ವರದಿ ಬಹಿರಂಗ

ಬೆಂಗಳೂರು:  ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಈಚೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿ ಬಹಿರಂಗಗೊಂಡಿದೆ. ಮುನ್ನೆಚ್ಚರಿಕೆ ಕೈಗೊಳ್ಳದ ಕಾರ್ಯಕ್ರಮವನ್ನು ಆಯೋಜಿಸಿದ್ದೇ ದುರ್ಘಟನೆಗೆ ಕಾರಣ ಎಂದು ಉಲ್ಲೇಖಿಸಿದೆ.

ನ್ಯಾಯಾಂಗ ಆಯೋಗ ಮತ್ತು ಮ್ಯಾಜಿಸ್ಟೀರಿಯಲ್ ತನಿಖೆಯ ವರದಿ ಬರುವವರೆಗೆ ವಸ್ತುಸ್ಥಿತಿ ವರದಿಯನ್ನು ಬಹಿರಂಗಗೊಳಿಸದಂತೆ ಸರ್ಕಾರವು ನ್ಯಾಯಾಲಯವನ್ನು ಕೋರಿಕೊಂಡಿತ್ತು. ಆದರೆ, ಜುಲೈ 8ರ ವಿಚಾರಣೆಯಂದು ವಸ್ತುಸ್ಥಿತಿ ವರದಿಯನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ಹಂಚುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿತ್ತು.

ಸಂಘಟಕರು ತುರ್ತು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ. ಕಾರ್ಯಕ್ರಮ ಆಯೋಜಕರು ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂಬ ಭಾವನೆ ಉಂಟು ಮಾಡಿದ್ದರು.

ಸಂಘಟಕರು ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿದ್ದರೆ ಸಕ್ಷಮ ಪ್ರಾಧಿಕಾರವು ತುರ್ತು ವೈದ್ಯಕೀಯ ವ್ಯವಸ್ಥೆ ಸೂಕ್ತವಾಗಿದೆಯೇ ಅಥವಾ ಅದಕ್ಕೆ ಪೂರಕವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿತ್ತು. ಕಾರ್ಯಕ್ರಮ ಆಯೋಜಿಸಲು ಮುಂಚಿತವಾಗಿ ಅನುಮತಿ ಕೋರದಿರುವುದರಿಂದ ಸಕ್ಷಮ ಪ್ರಾಧಿಕಾರ ಅದಕ್ಕೆ ವ್ಯವಸ್ಥೆ ಮಾಡಲಾಗಲಿಲ್ಲ ಎಂದು ಸರ್ಕಾರ ಹೇಳಿದೆ.

ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ವೈದ್ಯರು, ಶುಶ್ರೂಷಕಿಯರನ್ನು ಒಳಗೊಂಡ ಎರಡು ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿದು ಆರ್‌ಸಿಬಿ/ಡಿಎನ್‌ಎ/ಕೆಎಸ್‌ಸಿಎ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು ಪ್ರಾಥಮಿಕ ಕರ್ತವ್ಯ ಮತ್ತು ಜವಾಬ್ದಾರಿ ಆದರೂ ಅದನ್ನು ಮಾಡಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಜನಸಂದಣಿ ಅಂದಾಜಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಇರಲಿಲ್ಲ: ಕಾರ್ಯಕ್ರಮಕ್ಕೆ ಎಷ್ಟು ಜನರು ಬರಬಹುದು ಎಂದು ಅಂದಾಜಿಸಲು ರಾಜ್ಯ ಸರ್ಕಾರವು ಸಕಾರಣ ವಿಶ್ಲೇಷಣೆ ಮಾಡಿರಲಿಲ್ಲ. ಜೂನ್ 4ರಂದು ಜನಸಂದಣಿ ಅನಿರೀಕ್ಷಿತವಾಗಿ ಹೆಚ್ಚಾಗಿತ್ತು. ಸಂಭಾವ್ಯ ಜನಸಂದಣಿಯ ಗಾತ್ರದ ಪ್ರಾಯೋಗಿಕ ಅಂದಾಜು ಮಾಡಲು ನಗರ ಪೊಲೀಸರಿಗೆ ಸೂಕ್ತ ಸಮಯ ನೀಡಲಾಗಿರಲಿಲ್ಲ ಎಂದು ವಸ್ತುಸ್ಥಿತಿ ವರದಿಯಲ್ಲಿ ತಿಳಿಸಲಾಗಿದೆ.

ಕ್ರೀಡಾಂಗಣದಲ್ಲಿನ ಜನಸಂದಣಿಯನ್ನು ಹೊರ ಹೋಗುವಂತೆ ಮಾಡಲು 200 ತರಬೇತಿಯಲ್ಲಿದ್ದ ಸಿಬ್ಬಂದಿ, ಸಿಬ್ಬಂದಿ ಹಾಗೂ ಆರು ಡಿಸಿಪಿಗಳನ್ನು ನಿಯೋಜಿಸಲಾಗಿತ್ತು. ಬೆಂಗಳೂರು ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಲಭ್ಯ ಇರುವ ಪೊಲೀಸ್ ಸಿಬ್ಬಂದಿಯ ಜೊತೆಗೆ ತಕ್ಷಣ ಘಟನಾ ಸ್ಥಳಕ್ಕೆ ಬಂದು ಜನಸಂದಣಿ ನಿಯಂತ್ರಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.