ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಫೈಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಜಯ ದಾಖಲಿಸಿದೆ. ವಾಂಖೆಡೆ ಕ್ರೀಡಾಂಗಣದ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಭರ್ಜರಿಯಾಗಿ ಗೆಲುವಿನ ಹಳಿಗೆ ಮರಳಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಆಘಾತ ಅನುಭವಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಆರ್‌ಸಿಬಿ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಸ್ಟಾರ್ ಆಟಗಾರ ರೋಹಿತ್ ಶರ್ಮಾ 19 ರನ್ ಗಳಿಸಿದ್ದಾಗ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಸೂರ್ಯಕುಮಾರ್ ಯಾದವ್ (33) ಮತ್ತು ಹಾರ್ದಿಕ್ ಪಾಂಡ್ಯ (40), ಕೊನೆಯಲ್ಲಿ ಶರ್ಫೇನ್ ರುದರ್‌ಫೋರ್ಡ್ 71(31) ಗೆಲುವಿಗಾಗಿ ಪ್ರಯತ್ನಿಸಿದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಸಾಲ್ಟ್-ಪಟಿದಾರ್ ದರ್ಬಾರ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಿಂದಲೇ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಸ್ಫೋಟಕ ಅಡಿಪಾಯ ಹಾಕಿಕೊಟ್ಟರು. ಇನ್ನೊಂದೆಡೆ ವಿರಾಟ್ ಕೊಹ್ಲಿ (50 ರನ್, 38 ಎಸೆತ) ತಾಳ್ಮೆಯ ಆಟವಾಡಿ ಸಾಥ್ ನೀಡಿದರು. ಆದರೆ, ಪಂದ್ಯದ ಚಿತ್ರಣ ಬದಲಿಸಿದ್ದು ರಜತ್ ಪಟಿದಾರ್. ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿದ ಪಟಿದಾರ್, ವಾಂಖೆಡೆ ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಅಂತಿಮ ಹಂತದಲ್ಲಿ ಟಿಮ್ ಡೇವಿಡ್ (34*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 240/4 ರನ್‌ಗಳ ಬೃಹತ್ ಮೊತ್ತ ಪೇರಿಸಿತು(ಏಜೆನ್ಸೀಸ್).