ನ್ಯೂಸ್

ಸಮಚಿತ್ತತೆಯೊಂದಿಗೆ ಹಕ್ಕುಗಳ ರಕ್ಷಣೆಯಾಗಲಿ

mcbhadrashetti

ಚುನಾವಣಾ ಆಯೋಗದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ನ್ಯಾಯಾಂಗದ ನೈಪುಣ್ಯಕ್ಕೆ ಮಾದರಿಯಾಗಿದೆ. ಮದ್ರಾಸ್ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ, ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣಾ ಆಯೋಗ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಪರಿಣಾಮವಾಗಿ ಸಾಂಕ್ರಾಮಿಕ ರೋಗ ಹರಡಿತು ಎಂದು ಅಭಿಪ್ರಾಯಪಟ್ಟಿತು. ‘ಕೋವಿಡ್ ಎರಡನೇ ಅಲೆಗೆ ಚುನಾವಣಾ ಆಯೋಗವೇ ಏಕೈಕ ಹೊಣೆಯಾಗಿದೆ’ ಮತ್ತು ‘ಚುನಾವಣಾ ಆಯೋಗದ ಮೇಲೆ ಕೊಲೆ ಆರೋಪಗಳನ್ನು ಹಾಕಬೇಕು’ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಯಿತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್​ಗೆ ಹೋಯಿತು. ಚುನಾವಣಾ ಆಯೋಗ ಮತ್ತು ಹೈಕೋರ್ಟ್ ನಡುವಿನ ಸಂಘರ್ಷದಲ್ಲಿ ಯಾವ ಕಡೆಗೂ ವಾಲದೆ ಸುಪ್ರೀಂ ಕೋರ್ಟ್ ತಾನು ಮಾಡಲು ಬಯಸಿದ್ದನ್ನು ಮಾಡಿತು. ನ್ಯಾಯಾಲಯದ ವಿಚಾರಣೆಯನ್ನು ದಾಖಲೆಯ ಭಾಗವಾಗಿ ಮಾಡದಿದ್ದರೂ ನಿಖರವಾಗಿ ವರದಿ ಮಾಡುವ ಮಾಧ್ಯಮದ ಹಕ್ಕನ್ನು ತೀರ್ಪು ರಕ್ಷಿಸಿದೆ, ಚುನಾವಣಾ ಆಯೋಗದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ದಾಖಲಿಸಿದೆ ಮತ್ತು ‘ವಿಚಾರಣೆ ಸಮಯದಲ್ಲಿನ ಅಭಿಪ್ರಾಯಗಳು ತೀರ್ಪು ಅಥವಾ ನಿರ್ಧಾರವನ್ನು ರೂಪಿಸುವುದಿಲ್ಲ’ ಎಂದು ಮೌಖಿಕ ಅಭಿಪ್ರಾಯಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ನಾಜೂಕಾಗಿಯೇ ವ್ಯಕ್ತಪಡಿಸಿತು. ‘‘ಹೈಕೋರ್ಟ್​ನ ಟೀಕೆಗಳು ಕಠಿಣವಾಗಿವೆ. ಅದು ನೀಡಿರುವ ರೂಪಕ ಸೂಕ್ತವಾದುದಲ್ಲ. ಮುಕ್ತ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಯಾವುದೇ ಸಿದ್ಧತೆಗಳಿಲ್ಲದ ಟೀಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಅದನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುತ್ತದೆ. ಭಾಷೆ, ನ್ಯಾಯಪೀಠ ಮತ್ತು ತೀರ್ಪಗಳೆರಡರಲ್ಲೂ ‘ನ್ಯಾಯಾಂಗ ನಡವಳಿಕೆ’ಯೊಂದಿಗೆ ದೃಢೀಕೃತವಾಗಬೇಕು. ಹೈಕೋರ್ಟ್​ನ ಎಚ್ಚರಿಕೆ ಮತ್ತು ಸಲಹೆಯ ಮಟ್ಟವು ಸಂವಿಧಾನದಡಿಯಲ್ಲಿ ನೀಡಿರುವ ನ್ಯಾಯಾಂಗ ಪರಿಶೀಲನಾ ಅಧಿಕಾರದ ಸ್ವರೂಪ ಮತ್ತು ಆಯಾಮಗಳೊಂದಿಗೆ ನೇರ ಸಂಬಂಧ ಹೊಂದಿದೆ, ಅದು ಉನ್ನತವಾದುದು. ಈ ಸಂದೇಶವು ಸರ್ಕಾರದ ಕ್ರಮ ಅಥವಾ ನಿಷ್ಕ್ರಿಯತೆಗೆ ಪ್ರತಿಕ್ರಿಯಿಸುವ ನ್ಯಾಯಾಂಗ ಸ್ಥಾನಗಳಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ. ನ್ಯಾಯಾಧೀಶರು ಅವಹೇಳನಕಾರಿ ಹೇಳಿಕೆ ನೀಡುವ ಅಥವಾ ಅಪಹಾಸ್ಯ ಮಾಡುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿತು.

‘ನ್ಯಾಯಾಧೀಶರ ಪೀಠವು ಅಧಿಕಾರದ ಸ್ಥಾನವಾಗಿದೆ. ಸೈನ್ಯದ ಸಂಯಮ ಮತ್ತು ಶಿಸ್ತು ನ್ಯಾಯಾಂಗದ ಆಡಳಿತಕ್ಕೆ ಅವಶ್ಯಕ. ಸಂಯಮ ಮತ್ತು ವಿನಮ್ರತೆ ನ್ಯಾಯಾಧೀಶರ ಅಧಿಕಾರದ ಸ್ಥಿರ ವಿಷಯವಾಗಿದ್ದು, ಇದರ ಮೂಲಕ ಅವರು ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಮತ್ತು ರಕ್ಷಿಸುತ್ತಾರೆ’ ಎಂಬ ನ್ಯಾಯಮೂರ್ತಿ ಕೆ. ಜಗನ್ನಾಥ್ ಶೆಟ್ಟಿ ಹೇಳಿಕೆಯನ್ನು ನ್ಯಾಯಾಲಯ ಉಲ್ಲೇಖಿಸಿತು. ‘ನೀವು ಕುರುಡರಾಗಬಹುದು, ನಾವಲ್ಲ’ ಮತ್ತು ‘ಭಿಕ್ಷೆ ಬೇಡಿ, ಸಾಲ ಮಾಡಿ, ಆದರೆ ಆಮ್ಲಜನಕವನ್ನು ತನ್ನಿ’ ಎಂದು ಸರ್ಕಾರಕ್ಕೆ ಹೇಳುವಂಥ ಮೌಖಿಕ ಅಭಿಪ್ರಾಯಗಳು ಜನಪ್ರಿಯತೆ ಗಳಿಸುತ್ತಿವೆ, ಮಾಧ್ಯಮಗಳಲ್ಲಿ ಶೀರ್ಷಿಕೆಗಳಾಗುತ್ತಿವೆ. ನಿಸ್ಸಂದೇಹವಾಗಿ, ಸರ್ಕಾರ ತನ್ನ ನಾಗರಿಕರ ಜೀವವನ್ನು ರಕ್ಷಿಸಲು ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಸಿಬ್ಬಂದಿ, ಸಾಮಗ್ರಿಗಳು ಮತ್ತು ಸಾಧನಗಳನ್ನು ಒದಗಿಸುವ ಹೊಣೆಗಾರಿಕೆ ಹೊಂದಿದೆ. ಆದರೂ, ಇದು ಅಸಾಧಾರಣ ಪರಿಸ್ಥಿತಿ ಎಂಬ ಅಂಶವನ್ನು ನ್ಯಾಯಾಲಯಗಳು ಮರೆಯುವಂತಿಲ್ಲ.

ಆಡಳಿತಾತ್ಮಕ ಪ್ರಕ್ರಿಯೆ ಮೇಲೆ ನ್ಯಾಯಾಂಗಕ್ಕಿರುವ ಅಧಿಕಾರದ ಮೂಲಭೂತ ತತ್ತ್ವಗಳೆಂದರೆ, ನ್ಯಾಯಾಲಯಗಳು ನಿರ್ಧಾರದ ಪ್ರಕ್ರಿಯೆಯನ್ನು ಪರಿಶೀಲಿಸುತ್ತವೆಯೇ ಹೊರತು ನಿರ್ಧಾರವನ್ನೇ ಅಲ್ಲ. ಆ ನಿರ್ಧಾರ ಅಸಂವಿಧಾನಿಕ, ಕಾನೂನುಬಾಹಿರ ಅಥವಾ ವಿಕೃತವಾಗಿದ್ದರೆ ಮಾತ್ರ ಅದನ್ನು ಪರಿಶೀಲಿಸಬಹುದು. ‘ನಾನು ನೀವಾಗಿದ್ದರೆ, ಈ ನಿರ್ಧಾರ ಇನ್ನೂ ಉತ್ತಮವಾಗಿರುತ್ತಿತ್ತು’ ಎಂದುಕೊಂಡು ನ್ಯಾಯಾಲಯ ತನ್ನ ನಿರ್ಧಾರವನ್ನು ಕಾರ್ಯಾಂಗದ ಮೇಲೆ ಹೇರಲು ಸಾಧ್ಯವಿಲ್ಲ. ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕಿಂತ ಹೆಚ್ಚು ಮಾಹಿತಿ ತಮಗೆ ತಿಳಿದಿದೆಯೇ? ಅಗತ್ಯವಾದ ಸಂಗತಿಗಳನ್ನು ಉತ್ತಮವಾಗಿ ಸಂಗ್ರಹಿಸಲು ಅವರಿಗೆ ಮೂಲಗಳಿವೆಯೇ? ಅವರು ನ್ಯಾಯಾಲಯಗಳಲ್ಲಿ ಅಥವಾ ಕೋಣೆಗಳಲ್ಲಿ (11 ರಿಂದ 5) ಕುಳಿತು ನಿರ್ದೇಶನಗಳನ್ನು ಮತ್ತು ಆದೇಶಗಳನ್ನು ನೀಡುಬಹುದೇ? ಅವಶ್ಯಕತೆ ಬಿದ್ದರೆ, ದಿನದ 24 ಗಂಟೆ ಕೆಲಸ ಮಾಡಿ ಮತ್ತು ರಾತ್ರೋರಾತ್ರಿ, ನಿಮಿಷ ನಿಮಿಷಕ್ಕೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಎಂದು ನ್ಯಾಯಾಲಯಗಳು ತಮ್ಮನ್ನು ತಾವೇ ಕೇಳಿಕೊಳ್ಳಬೇಕು.

ನ್ಯಾಯಾಂಗದ ಕ್ರಿಯಾತ್ಮಕತೆಯನ್ನು (ಆಕ್ಟಿವಿಸಂ) ಉದಾರವಾಗಿ ಅರ್ಥೈಸಿದ್ದರೂ, ಅದು ಪ್ರಗತಿ ವಿರೋಧಿಯಾಗಿರುತ್ತದೆ ಮತ್ತು ನ್ಯಾಯಾಂಗ ಆಡಳಿತದ ಪಾತ್ರವನ್ನು ವಹಿಸಿಕೊಂಡರೆ ಅದರ ಶ್ಲಾಘನೀಯ ಉದ್ದೇಶ ಸಾಧಿಸುವಲ್ಲಿ ವಿಫಲವಾಗುತ್ತದೆ. ಕಾರ್ಯಾಂಗ ಕೆಲಸ ಮಾಡುವಂತೆ ನಿರ್ದೇಶನ ನೀಡುವುದು ಒಂದು ವಿಷಯವಾದರೆ, ‘ನೀವು ಮಾಡದಿದ್ದರೆ, ಅದನ್ನು ನಾವೇ ಮಾಡುತ್ತೇವೆ’ ಎಂದು ಹೇಳುವುದು ಮತ್ತೊಂದು ವಿಷಯ.

ಆಡಳಿತದ ಮೂರು ಅಂಗಗಳಾದ- ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ- ಪರಸ್ಪರ ನಂಬಿಕೆ ಹೊಂದಿರಬೇಕು. ಪರಸ್ಪರ ವಿಶ್ವಾಸದ ಕೊರತೆಯಿಲ್ಲದೆ, ಒಂದು ಅಂಗ ಇನ್ನೊಂದರ ಕ್ರಿಯೆ ಅಥವಾ ನಿಷ್ಕ್ರಿಯತೆಯನ್ನು ಪರಿಶೀಲನೆಗೊಳಪಡಿಸುವುದಿಲ್ಲ. ಕಾರ್ಯಾಂಗದ ತಪ್ಪನ್ನು ಸರಿಪಡಿಸಲು ಮತ್ತು ಅದು ಕಾರ್ಯನಿರ್ವಹಿಸಲು ವಿಫಲವಾದರೆ ಕಾರ್ಯನಿರ್ವಹಿಸುವಂತೆ ನಿರ್ದೇಶಿಸಲು ನ್ಯಾಯಾಂಗಕ್ಕೆ ಅಧಿಕಾರವಿದೆ. ಅದೇ ಸಮಯದಲ್ಲಿ, ತಿಳಿದೋ ಅಥವಾ ತಿಳಿಯದೆಯೋ ಸರ್ಕಾರಗಳ ಹೊಣೆಗಾರಿಕೆ ನಿರ್ವಹಣೆಯಲ್ಲಿ ನ್ಯಾಯಾಲಯಗಳು ಅಡಚಣೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಕಟುವಾದ ಟೀಕೆಗಳು ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠ ಅಧಿಕಾರಿಗಳನ್ನು ನಿರುತ್ಸಾಹಗೊಳಿಸುತ್ತವೆ. ಅವರು ಅನಿರೀಕ್ಷಿತವಾದ ಮತ್ತು ವೈಜ್ಞಾನಿಕ ಸಮುದಾಯಕ್ಕೂ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲದ ಸಾಂಕ್ರಾಮಿಕದೊಂದಿಗೆ ಹಗಲು-ರಾತ್ರಿ ಹೋರಾಡುತ್ತಿದ್ದಾರೆ. ನಮ್ಮದು ಒಕ್ಕೂಟ ವ್ಯವಸ್ಥೆಯಾಗಿದ್ದು, ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರ ರಾಜ್ಯಗಳ ಅಗತ್ಯಗಳನ್ನು ಪೂರೈಸಬೇಕು. ಅದೇ ಸಂದರ್ಭದಲ್ಲಿ, ಸಂಪನ್ಮೂಲಗಳು ಸೀಮಿತವಾಗಿದ್ದರೆ ಅದು ರಾಜ್ಯಗಳ ಪರಸ್ಪರ ವಿರೋಧಾಭಾಸದ ಬೇಡಿಕೆಗಳನ್ನು ಸೂಕ್ಷ್ಮವಾಗಿ ಸಮತೋಲನಗೊಳಿಸಬೇಕು ಮತ್ತು ಸಮೀಕರಿಸಬೇಕು. ಸಮಚಿತ್ತತೆ ಬಿಟ್ಟುಕೊಡದೆ ಜನರ ಸಾಂವಿಧಾನಿಕ ಹಕ್ಕುಗಳನ್ನು ದೃಢವಾಗಿ ಎತ್ತಿಹಿಡಿಯುವ ನ್ಯಾಯಾಂಗದ ನಿಷ್ಪಕ್ಷಪಾತ ಆಡಳಿತ ಸಾರ್ವಜನಿಕರಲ್ಲಿ ವಿಶ್ವಾಸ ಉಳಿಸುತ್ತದೆ. ಪ್ರಜಾಪ್ರಭುತ್ವದಲ್ಲಿ, ಮೂರು ಅಂಗಗಳ ನಡುವೆ ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ತೀವ್ರವಾಗಿರುವ ಈ ಸೋಂಕನ್ನು ನಿವಾರಿಸಲು ಮೂರೂ ಅಂಗಗಳು ಒಗ್ಗಟ್ಟಿನಿಂದ ಹೋರಾಡುವ ನಿರೀಕ್ಷೆಯಿದೆ. ‘ಕಾನೂನಿನ ಸಂರಕ್ಷಕರಾದ ನ್ಯಾಯಾಧೀಶರು ಸಹ ಸಾಮಾಜಿಕ ನಾಯಕತ್ವದ ಗುಣಗಳನ್ನು ಪ್ರದರ್ಶಿಸಬೇಕು. ಅವರಿಗೆ ಉತ್ಸಾಹ ಇರಬೇಕು. ಆದರೆ, ತಪ್ಪಾದ ಉತ್ಸಾಹ ನಿಷ್ಪಕ್ಷಪಾತವಾಗಿರುವುದಿಲ್ಲ’ ಎಂಬ ಪ್ಯಾಟ್ರಿಕ್ ಡೆವ್ಲಿನ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು.

‘ಸಂಕಷ್ಟದ ಸಮಯದಲ್ಲಿ ಮಾರ್ಗದರ್ಶನ ಮಾಡುವ ನ್ಯಾಯಾಂಗ ನೀತಿ ಮತ್ತು ನ್ಯಾಯಾಂಗ ತತ್ತ್ವಶಾಸ್ತ್ರ ನ್ಯಾಯಾಂಗಕ್ಕೆ ಮೂಲಭೂತವಾದದ್ದು’ ಎಂದು

ಅಹರೋನ್ ಬರಾಕ್ ‘ದಿ ಜಡ್ಜ್ ಇನ್ ಎ ಡೆಮಾಕ್ರಸಿ’ಯಲ್ಲಿ ಬರೆದಿದ್ದಾರೆ. ನ್ಯಾಯಾಧೀಶರ ಶಕ್ತಿ ಅವರ ಮಿತಿಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಕಷ್ಟಕರವಾದ ಕಾನೂನು ಸಮಸ್ಯೆಗಳಿಗೆ ಉತ್ತರಗಳನ್ನು ಹೊಂದಿರುವುದಕ್ಕಿಂತ ಹೆಚ್ಚಾಗಿ, ಅವರು ಅನುಸರಿಸಬೇಕಾದ ಹಾದಿಯ ಬಗ್ಗೆ ಅವರಿಗೆ ಪ್ರಶ್ನೆಗಳಿವೆ. ಎಲ್ಲ ಮನುಷ್ಯರು ತಪು್ಪ ಮಾಡುತ್ತಾರೆ; ಆದರೆ ನ್ಯಾಯಾಧೀಶರಿಗೆ, ಉತ್ತಮ ನ್ಯಾಯಾಂಗ ತತ್ತ್ವಶಾಸ್ತ್ರಕ್ಕಿಂತ ಸೂಕ್ತವಾದದ್ದು ಮತ್ತು ಪ್ರಾಯೋಗಿಕವಾದದ್ದು ಬೇರಾವುದೂ ಇಲ್ಲ.

(ಲೇಖಕರು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ)