ಮೈಸೂರು: ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅವರ ಮುಂಬರುವ ಪ್ಯಾನ್ ಇಂಡಿಯಾ 'ಗೇಮ್ ಚೇಂಜರ್' ಚಿತ್ರವು ತೆರೆಗೆ ಬರಲು ಎದುರುನೋಡುತ್ತಿದ್ದು, ಜನವರಿ 10, 2025ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ 'ಉಪ್ಪೇನಾ' ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಹಾಗೂ ರಾಮ್ಚರಣ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ 'ಆರ್‌ಸಿ 16' ಚಿತ್ರದ ಚಿತ್ರೀಕರಣ ಇದೀಗ ಮೈಸೂರಿನಿಂದ ಆರಂಭಗೊಂಡಿದೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶರು, ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ 'ಆರ್‌ಸಿ 16' ಚಿತ್ರದ ಸ್ಕ್ರಿಪ್ಟ್ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ. “ಇದೊಂದು ದೊಡ್ಡ ದಿನ ಮತ್ತು ಬಹುನಿರೀಕ್ಷಿತ ಕ್ಷಣ. ಮೈಸೂರಿನ ಚಾಮುಂಡೇಶ್ವರಿ ಅಮ್ಮನ ಆಶೀರ್ವಾದದೊಂದಿಗೆ ನಮ್ಮ ದಿನ ಆರಂಭವಾಯಿತು. ನಿಮ್ಮೆಲ್ಲರ ಹಾರೈಕೆ ಅಗತ್ಯವಿದೆ" ಎಂದು ಬರೆದುಕೊಂಡಿದ್ದಾರೆ.
'ಆರ್ 16' ಚಿತ್ರದಲ್ಲಿ ರಾಮ್ಚರಣ್ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಬಣ್ಣ ಹಚ್ಚಲಿದ್ದು, ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಗ್ರಾಮೀಣ ಕ್ರೀಡಾ ಕಥೆ ಆಧರಿತ ಚಿತ್ರ ಇದಾಗಿದ್ದು, ವೃದ್ಧಿ ಸಿನಿಮಾಸ್‌ನ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರಸ್ತುತಪಡಿಸುತ್ತಿರುವ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).