RBI : ಇತ್ತೀಚೆಗೆ ಯೂಟ್ಯೂಬ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿ 2026ರ ವೇಳೆಗೆ 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಇದರಿಂದ ಜನರಲ್ಲಿ ಸಾಕಷ್ಟು ಗೊಂದಲು ಉಂಟಾಗಿತ್ತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯೂಟ್ಯೂಬ್ ವಿಡಿಯೋ ತಪ್ಪು ಮಾಹಿತಿಯಿಂದ ಕೂಡಿದೆ ಮತ್ತು 500 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗುವುದಿಲ್ಲ ಎಂದು ಹೇಳಿದೆ.
ಜೂನ್ 2 ರಂದು 'ಕ್ಯಾಪಿಟಲ್ ಟಿವಿ' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಮುಂದಿನ ವರ್ಷದ ಮಾರ್ಚ್‌ನಿಂದ ಹಂತ ಹಂತವಾಗಿ 500 ರೂ. ನೋಟುಗಳನ್ನು ಹಿಂಪಡೆಯಲಾಗುವುದು ಎಂದು ವಿಡಿಯೋದಲ್ಲಿ ಹೇಳಲಾಗಿತ್ತು.
ಯಾವಾಗ ವಿಡಿಯೋ ವೈರಲ್ ಆಯ್ತೋ, ಸಾಕಷ್ಟು ಮಂದಿ ಗೊಂದಲಕ್ಕೆ ಒಳಗಾದರು. ಮತ್ತೆ ಬ್ಯಾಂಕ್ನಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಾ ಎಂದು ಚಿಂತಿತರಾದರು. ಈ ಬಗ್ಗೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಲು ಶುರು ಮಾಡಿದರು. ಇದನ್ನು ಗಮನಿಸಿದ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ 500 ರೂ. ನೋಟು ರದ್ದತಿಯನ್ನು ತಿರಸ್ಕರಿಸಿದೆ.
500 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗಿಲ್ಲ. ಅವು ಇನ್ನೂ ಕಾನೂನುಬದ್ಧ ಚಲಾವಣೆಯಲ್ಲಿವೆ ಎಂದು ಸರ್ಕಾರದ ಅಧಿಕೃತ ಪತ್ರಿಕಾ ಮಾಹಿತಿ ಬ್ಯೂರೋ (PIB) ದ ಸತ್ಯ ಪರಿಶೀಲನಾ ವಿಭಾಗವು ಎಕ್ಸ್ನಲ್ಲಿ ಬರೆದಿದೆ. ಕ್ಯಾಪಿಟಲ್ ಟಿವಿಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಹೇಳಿಕೆಯನ್ನು ನಿರಾಕರಿಸಲಾಗಿದೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬದಂತೆ ಹಾಗೂ ಸುಳ್ಳು ಸುದ್ದಿಗಳನ್ನು ಹರಿಬಿಡದಂತೆ ಎಚ್ಚರಿಸಿದೆ. (ಏಜೆನ್ಸೀಸ್)