ನ್ಯೂಸ್

ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ರಾಮನಗರದಲ್ಲಿ ಪಲ್ಟಿ

ರಾಮನಗರ: ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಬಿಡದಿಯ ಕಲ್ಲುಗೋಪಹಳ್ಳಿ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಸುಮಾರು 18‌ ಕಂಟೇನರ್​ಗಳು ಗುರುವಾರ ಮಧ್ಯಾಹ್ನ ಮೈಸೂರಿನಿಂದ‌ ಬೆಂಗಳೂರಿಗೆ ಹಣ ತುಂಬಿಕೊಂಡು ಸಿಐಎಸ್ಎಫ್ ಪೊಲೀಸರ ಭದ್ರತೆಯಲ್ಲಿ ಹೋಗುತ್ತಿದ್ದವು. ಮಾರ್ಗಮಧ್ಯೆ ಕಲ್ಲುಗೋಪಹಳ್ಳಿ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರಿಂದ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಒಂದು ಕಂಟೇನರ್ ಪಲ್ಟಿಯಾಗಿದೆ.

ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಬಂದ ಬಿಡದಿ ಪೊಲೀಸರು ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದರು. ಆರ್​ಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಕಂಟೇನರ್​ ತೆರವು ಮಾಡಲಿದ್ದಾರೆ.