ದಾವಣಗೆರೆ: ಶಾಸಕ ರವೀಂದ್ರನಾಥ್ ಅವರ ಮೊಮ್ಮಗ ಚಲಾಯಿಸುತ್ತಿದ್ದ ಕಾರು ಭಾನುವಾರ ತಡ ರಾತ್ರಿ ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಮನೆ ಮೇಲೆ ಬಿದ್ದಿದೆ.
ಅಪಘಾತ ಸಂಭವಿಸಿದ ವೇಳೆ ವಿದ್ಯುತ್ ಕಂಬದ ತಿಂತಿಗಳಲ್ಲಿ ವಿದ್ಯುತ್ ಪೂರೈಕೆಯಾಗುತ್ತಿತ್ತು. ಹೀಗಿದ್ದರೂ ಯಾರಿಗೂ ಅಪಾಯ ಸಂಭವಿಸಲಿಲ್ಲ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಮಗ ಅರುಣ್ ಕುಮಾರ್ ಭಾನುವಾರ ತಡ ರಾತ್ರಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ದಾವಣಗೆರೆ ಹೊರವಲಯದಲ್ಲಿರುವ ಶಾಮನೂರು ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಂಬ ಮುರಿದು ಮನೆ ಮೇಲೆ ಬಿತ್ತು. ಇದನ್ನು ಗ್ರಾಮಸ್ಥರು ಪ್ರಶ್ನಿಸಲು ಮುಂದಾದರು. ಇದರಿಂದ ಉದ್ರಿಕ್ತಗೊಂಡ ಅರುಣ್ ಕುಮಾರ್ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಲು ಮುಂದಾದರು. ಗ್ರಾಮಸ್ಥರು ಒಟ್ಟಾಗಿ ಪ್ರತಿರೋಧ ತೋರಿದ ನಂತರ ಅರುಣ್ ಕುಮಾರ್ ಕಾರು ಬಿಟ್ಟು ನಾಪತ್ತೆಯಾದರು. ಕಾರಿನಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪಾಸ್ ಪತ್ತೆಯಾಗಿದೆ.
ವಿದ್ಯಾನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಶಾಸಕರ ಮೊಮ್ಮಗ ಅರುಣ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್)