ನ್ಯೂಸ್

ಬಡವರ ಅನ್ನಕ್ಕೆ ಕಳ್ಳರ ಕನ್ನ: ನೆರೆರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ; ಪಾಲಿಷ್ ಮಾಡಿ ಮಾರಾಟ

ಮಂಜುನಾಥ ಕೋಳಿಗುಡ್ಡ ಬೆಳಗಾವಿ/ ಬೆಂಗಳೂರು

ಬಡವರ ಅಕ್ಕಿ ಮೇಲೂ ಕಳ್ಳರ ಕಣ್ಣು ಬಿದ್ದಿದೆ. ಸರ್ಕಾರವು ಬಡವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ನೀಡುತ್ತಿರುವ ಪಡಿತರ ಆಹಾರ ಧಾನ್ಯ ‘ಪಾಲಿಷ್’ ರೂಪ ಪಡೆದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಳ್ಳಮಾರ್ಗದ ಮೂಲಕ ಮಹಾರಾಷ್ಟ್ರ, ಗೋವಾ ಸೇರಿ ನೆರೆಯ ರಾಜ್ಯಗಳ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಫಲಾನುಭವಿಗಳು, ನ್ಯಾಯಬೆಲೆ ಅಂಗಡಿ ಹಾಗೂ ಗೋದಾಮುಗಳ ಮೂಲಕ ಈ ಪಡಿತರ ಅಕ್ಕಿ ಕಳ್ಳಸಾಗಣೆಗೆ ವ್ಯವಸ್ಥಿತ ಜಾಲ ಹೆಣೆದುಕೊಂಡಿರುವುದು ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿ ಮಾರ್ಗವಾಗಿ ಅಕ್ರಮವಾಗಿ ನೆರೆಯ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದ ವಾಹನಗಳ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 67.13 ಲಕ್ಷ ರೂ. ಮೌಲ್ಯದ 3,804 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗಿದ್ದ 89 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, 130 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಹಾರ ಭದ್ರತಾ ಕಾಯ್ದೆಯಡಿ ಆದ್ಯತಾ ವಲಯದ ಪಡಿತರ ಚೀಟಿ (ಬಿಪಿಎಲ್), ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತೆಯೇತರ ವಲಯದ ಕುಟುಂಬ (ಎನ್​ಪಿಎಚ್​ಎಚ್) ಸೇರಿ ರಾಜ್ಯದಲ್ಲಿನ 1.47 ಕೋಟಿ ಪಡಿತರ ಚೀಟಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಗಳ ಮೂಲಕ ಉಚಿತ ಮತ್ತು ರಿಯಾಯಿತಿ ದರದಲ್ಲಿ ಪ್ರತಿ ತಿಂಗಳು ಅಂದಾಜು 2.32 ಲಕ್ಷ ಟನ್ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.

ಬಿಪಿಎಲ್, ಅಂತ್ಯೋದಯ ಕಾರ್ಡ್​ಗಳಲ್ಲಿನ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳು ಒಂದು ಪಡಿತರ ಚೀಟಿಗೆ ಕನಿಷ್ಠ 30 ರಿಂದ 45 ಕೆಜಿ ಅಕ್ಕಿ ದೊರೆಯುತ್ತದೆ. ಗೋದಾಮುಗಳಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಣೆ ವೇಳೆ ದುರುಪಯೋಗವಾಗದಂತೆ ಜಿಪಿಎಸ್ ಅಳವಡಿಸಲಾಗಿದೆ.

ಆದರೆ, ಕೆಲ ಏಜೆಂಟರು ಬಿಪಿಎಲ್, ಎಎವೈ ಚೀಟಿದಾರರಿಂದ ಕೆಜಿಗೆ 10 ರಿಂದ 12 ರೂ. ದರದಲ್ಲಿ ಅಕ್ಕಿ ಖರೀದಿಸುತ್ತಿದ್ದಾರೆ. ಆ ಅಕ್ಕಿಯನ್ನು ನಗರ ಪ್ರದೇಶಗಳಲ್ಲಿನ ಹೋಟೆಲ್​ಗಳಿಗೆ ಹಾಗೂ ವಿವಿಧ ವಲಯದಲ್ಲಿನ ಕಾರ್ವಿುಕರಿಗೆ ಕೆಜಿಗೆ 25 ರಿಂದ 40 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಅಕ್ರಮ ಅಕ್ಕಿ ವಾಪಸ್ ಖರೀದಿ: ಪಡಿತರ ಧಾನ್ಯ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ವಾಹನಗಳ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಹಾಕಿಕೊಂಡಿರುವ ಅಕ್ಕಿಯನ್ನು ಮರು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಅಕ್ಕಿಯನ್ನು ಮಾರುಕಟ್ಟೆಯ ದರದಲ್ಲಿ ವಾಪಸ್ ಇಲಾಖೆಗೆ ‘ಖರೀದಿ’ ರೂಪದಲ್ಲಿ ಮರಳಿ ಪಡೆಯಲಾಗುತ್ತದೆ. ಆ ತಿಂಗಳು ಖರೀದಿಸಬೇಕಾದ ಒಟ್ಟಾರೆ ಪ್ರಮಾಣದಲ್ಲಿ ವಶಪಡಿಸಿಕೊಂಡಿರುವ ಅಕ್ಕಿಯನ್ನು ಸೇರಿಸಿ ಸರಿದೂಗಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ರಾಷ್ಟ್ರೀಯ ಹೆದ್ದಾರಿಯ ಮೂಲಕ ನೆರೆಯ ರಾಜ್ಯಗಳಿಗೆ ಪಡಿತರ ಸಾಗಣೆ ಮಾಡುತ್ತಿರುವ ಮಾಹಿತಿ ಬಂದಿದೆ. ಮಾಹಿತಿ ಬಂದ ತಕ್ಷಣವೇ ದಾಳಿ ನಡೆಸಿ ಧಾನ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. | ಶ್ರೀಶೈಲ ಬಿ. ಕಂಕಣವಾಡಿ ಆಹಾರ ಇಲಾಖೆ ಉಪನಿರ್ದೇಶಕ ಪಡಿತರ ಧಾನ್ಯಗಳನ್ನು ನೆರೆಯ ರಾಜ್ಯಗಳಿಗೆ ಸಾಗಿಸುವುದಕ್ಕೆ ಕಡಿವಾಣ ಹಾಕಲು ಗಡಿ ಭಾಗದ ಚೆಕ್​ಪೋಸ್ಟ್​ಗಳಲ್ಲಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. | ಡಾ.ಸಂಜೀವ ಪಾಟೀಲ ಬೆಳಗಾವಿ ಎಸ್​ಪಿ

ಪಾಲಿಶ್ ಧಂದೆ ಅವ್ಯಾಹತ: ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಖರೀದಿಸುವ ಕಾಳಸಂತೆಕೋರರು, ರೈಸ್​ವಿುಲ್​ನಲ್ಲಿ ಈ ಅಕ್ಕಿಯಲ್ಲಿರುವ ಕಲ್ಲು, ಮಣ್ಣು ಮತ್ತು ನುಚ್ಚು ತೆಗೆದು ಶುದ್ಧೀಕರಿಸಿ (ಸಾರ್ಟೆಕ್ಸ್) ಪಾಲಿಷ್ ಮಾಡಿ ಕುಸುಬಲು ಅಕ್ಕಿ, ನುಚ್ಚು, ಬೆಣ್ತೆ ಅಕ್ಕಿ, ಸೋನ ಮಸೂರಿ ಮಾದರಿ ಅಕ್ಕಿ ಹಾಗೂ ಸ್ಟೀಮ್ ಅಕ್ಕಿಯಾಗಿ ಪರಿವರ್ತಿಸುತ್ತಾರೆ. ವಿವಿಧ ಬ್ರಾ್ಯಂಡ್​ಗಳಲ್ಲಿ ಮರು ಪ್ಯಾಕಿಂಗ್ ಮಾಡುತ್ತಾರೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 45 ರೂ.ನಿಂದ 60 ರೂ.ವರೆಗೆ ಮಾರಾಟ ಮಾಡುತ್ತಾರೆ. ವಿದೇಶಗಳಿಗೂ ರಫ್ತು ಮಾಡಲಾಗುವ ಮಾಹಿತಿ ಇದೆ.

ಹೇಗೆಲ್ಲ ಕನ್ನ?: ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡುತ್ತಾರೆ. ಇಲಾಖೆಯ ಸಗಟು ಮಳಿಗೆಗಳಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಹೆಚ್ಚುವರಿ ದಾಸ್ತಾನು ಸಂಗ್ರಹಿಸಿ ರೈಸ್ ಮಿಲ್​ಗಳಿಗೆ ಸಾಗಿಸಲಾಗುತ್ತದೆ. ಇಲಾಖೆಯ ಅಧೀನದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಪಡಿತರ ದುರ್ಬಳಕೆ ಪ್ರಕರಣ ಸಂಬಂಧ ಅಧಿಕಾರಿಗಳೇ ಸಿಕ್ಕಿಬಿದ್ದಿರುವ ನಿದರ್ಶನಗಳಿವೆ.

ವಿಚಕ್ಷಣ ದಳ ನಿಷ್ಕ್ರಿಯ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್​ನಲ್ಲಿ ಘೋಷಿಸಿದ್ದ ವಿಚಕ್ಷಣದಳ ನೇಮಕ ಅಧಿಕಾರಿಗಳ ಕೊರತೆಯಿಂದ ನಿಷ್ಕ್ರಿಯವಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು ಪಡಿತರದಾರರಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೋ, ಇಲ್ಲವೋ ಎಂಬುದನ್ನು ಫಲಾನುಭವಿಗಳಿಂದ ಮಾಹಿತಿ ಪಡೆದುಕೊಳ್ಳುವುದು, ಎಷ್ಟು ದಾಸ್ತಾನು ವಿತರಣೆ? ಉಳಿದಿರುವುದೆಷ್ಟು? ಪತ್ತೆ ಹಚ್ಚುವುದು, ಅಕ್ರಮವೆಸಗಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಅಂಗಡಿ ಪರವಾನಗಿ ರದ್ದು ಮಾಡುವುದು ವಿಚಕ್ಷಣ ದಳದ ಕಾರ್ಯವಾಗಿತ್ತು.

ಪ್ರಬಲ ಕಾನೂನು ಇಲ್ಲ: ಪಡಿತರ ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಇಲಾಖೆಯಲ್ಲಿ ಪ್ರಬಲ ಕಾನೂನು ಇಲ್ಲ. 2013ರಿಂದ 2017ರವರೆಗೆ ಸಾವಿರಾರು ಪ್ರಕರಣ ಮತ್ತು ಎಫ್​ಐಆರ್ ದಾಖಲಾಗಿದ್ದರೂ ಈವರೆಗೆ ಒಬ್ಬ ಆರೋಪಿಗೂ ಶಿಕ್ಷೆ ಆಗಿಲ್ಲ ಎನ್ನುವುದು ವಿಪರ್ಯಾಸ.

ಹಾವೇರಿ, ಗದಗ ಜಿಲ್ಲೆಗಳಲ್ಲೂ ಅವ್ಯಾಹತ

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳದಂಧೆಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಕೇಂದ್ರಬಿಂದುವಾಗುತ್ತಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳಿಂದಲೂ ಪ್ರತಿ ತಿಂಗಳು ಹತ್ತಾರು ಲಾರಿಗಳಲ್ಲಿ ಅಕ್ಕಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ, ಗೋಡೌನ್​ಗಳ ಮೂಲಕ ಅಕ್ಕಿ ಸಂಗ್ರಹಿಸುತ್ತಾರೆ. ಇದಲ್ಲದೆ, ಬಿಪಿಎಲ್ ಕಾರ್ಡ್​ದಾರರ ಮನೆಗಳಿಗೆ ತೆರಳಿ 10, 12 ರೂ.ಗೆ ಕೆಜಿಯಂತೆ ಪಡೆಯುತ್ತಾರೆ. ಇದನ್ನೇ ಪಾಲಿಶ್ ಮಾಡಿ 25, 30 ರೂ.ಗಳಿಗೆ ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ಬೆಳಗಾವಿ ಜಿಲ್ಲೆ, ಹುಬ್ಬಳ್ಳಿಯ ಗಬ್ಬೂರ ಬೈಪಾಸ್, ಅಣ್ಣಿಗೇರಿ ಬಳಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ತಂಡ ಈ ದಂಧೆಕೋರರನ್ನು ಬಂಧಿಸಿ ಅಕ್ಕಿ ವಶಪಡಿಸಿಕೊಂಡ ಹಲವು ನಿದರ್ಶನಗಳಿವೆ.

ರಾಜಕೀಯ ಪ್ರಭಾವ?: ಉತ್ತರ ಕರ್ನಾಟಕದಲ್ಲಿ ಜೋಳದ ಬಳಕೆ ಜಾಸ್ತಿ. ಹೀಗಾಗಿ ಅನೇಕ ಕುಟುಂಬದವರು ಅಕ್ಕಿಯನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಿಕೊಳ್ಳುತ್ತಾರೆ. ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಕಾಳಸಂತೆಕೋರರು ದಂಧೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.