ನ್ಯೂಸ್

ಚಿಕ್ಕ ಜಾತ್ರಾ ಮಹೋತ್ಸವ ನಾಳೆ

ಎ. ಆರ್. ರಘುರಾಮ


ನಂಜನಗೂಡು : ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ನ.28ರಂದು ಮಂಗಳವಾರ ಉತ್ಸವಮೂರ್ತಿ ರಥೋತ್ಸವ ಜರುಗಲಿದೆ. ಇದಕ್ಕಾಗಿ ದೇವಾಲಯಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಈ ಬಾರಿ ಹುತ್ತರಿ ಹುಣ್ಣಿಮೆ ಮರುದಿನ ಚಿಕ್ಕ ಜಾತ್ರೆ ನಡೆಯುತ್ತಿದ್ದು, ಅಂದು ಬೆಳಗ್ಗೆ 10.45 ರಿಂದ 11.45ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ರಥೋತ್ಸವ ಸಾಗಲಿದೆ. ಶಾಸಕ ದರ್ಶನ್ ಧ್ರುವನಾರಾಯಣ ರಥೋತ್ಸವಕ್ಕೆ ಜಾಲನೆ ನೀಡಲಿದ್ದಾರೆ. ಜಾತ್ರೆಯನ್ನು ಕಳೆಗಟ್ಟಿಸುವ ಸಲುವಾಗಿ ದೇವಾಲಯದ ಸುತ್ತ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಮಾವಿನ ತಳಿರು, ತೋರಣದಿಂದ ದೇವಾಲಯವನ್ನು ಸಿಂಗರಿಸಲಾಗುತ್ತಿದೆ.
ರಥೋತ್ಸವದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಯನ್ನು ಹೊತ್ತು ಸಾಗುವ ಚಿಕ್ಕ ರಥ ಸೇರಿದಂತೆ ಗಣಪತಿ ಹಾಗೂ ಚಂಡಿಕೇಶ್ವರ ರಥಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಪೂರ್ಣಗೊಂಡಿದೆ. ರಥಗಳ ಸಿಂಗಾರ ಕಾರ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಸಿದ್ಧತೆಗೆ ಭಾನುವಾರ ಚಾಲನೆ ನೀಡಲಾಯಿತು. ರಥಕ್ಕೆ ಬಗೆ ಬಗೆಯ ಅಲಂಕಾರಿಕ ವಿನ್ಯಾಸಗಳ ಜೋಡಣೆ, ರಥ ಎಳೆಯುವ ಸಲುವಾಗಿ ಹಗ್ಗ ಕಟ್ಟುವುದಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ರಥೋತ್ಸವ ದಿನ ಉತ್ಸವಮೂರ್ತಿಗಳ ಅಲಂಕಾರಕ್ಕೆ ಉಗ್ರಾಣದಲ್ಲಿ ಇರಿಸಲಾಗಿದ್ದ ವಜ್ರ ವೈಢೂರ್ಯಗಳನ್ನು ಅರ್ಚಕರ ಸುಪರ್ದಿಗೆ ನೀಡಲಾಯಿತು.
ಧಾರ್ಮಿಕ ಕಾರ್ಯ: ಜಾತ್ರೆ ನ.21ರಿಂದಲೇ ಅಧಿಕೃತವಾಗಿ ಆರಂಭಗೊಂಡಿದ್ದು, ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸಾಂಗವಾಗಿ ನೆರವೇರುತ್ತಿದೆ.
ದೇವಾಲಯದ ಖಜಾನೆಯಲ್ಲಿ ಸುರಕ್ಷಿತವಾಗಿ ಇಡಲಾಗಿರುವ ರತ್ನಖಚಿತ ಚಿನ್ನಾಭರಣಗಳನ್ನು ಕಾರ್ಯನಿರ್ವಹಣಾಧಿಕಾರಿ ಎಂ.ಜಗದೀಶ್ ಕುಮಾರ್ ಸಮ್ಮುಖದಲ್ಲಿ ಹೊರ ತೆಗೆದು ಪರಿಶೀಲನೆ ನಡೆಸಿ ದೇವರ ಸೇವೆಗೆ ನೀಡಲಾಗಿದೆ. ನ.25ರಂದು ಶನಿವಾರ ನವರತ್ನ ಶ್ರೀಕಂಠಮುಡಿ ಕಿರೀಟಧಾರಣೆ ಹಾಗೂ ಪುಷ್ಪ ಮಂಟಪೋತ್ಸವ ನೆರವೇರಿಸಲಾಗಿದೆ.
ರಥೋತ್ಸವ ದಿನವಾದ ಮಂಗಳವಾರ ಸ್ವಾಮಿ ಹಾಗೂ ಪಾರ್ವತಿದೇವಿ ಸಮೇತ ಉತ್ಸವಮೂರ್ತಿ, ಗಣಪತಿ, ಚಂಡೀಕೇಶ್ವರ ಸೇರಿದಂತೆ ಮೂರು ರಥಗಳು ರಥಬೀದಿಯಲ್ಲಿ ಸಾಗಲಿವೆ. ರಥೋತ್ಸವ ನಂತರ ಹಂಸಾರೋಹಣಾ ಹಾಗೂ ನಟೇಶೋತ್ಸವ ನಡೆಯಲಿದೆ.
ನ.30ರ ಗುರುವಾರ ಸಂಜೆ 7ಕ್ಕೆ ಕಪಿಲಾ ಸ್ನಾನಘಟ್ಟದಲ್ಲಿ ವಿದ್ಯುತ್ ದೀಪಾಲಂಕೃತ ತೆಪ್ಪದಲ್ಲಿ ಮಂಗಳ ವಾದ್ಯಗೋಷ್ಠಿಯಂದಿಗೆ ಪುಷ್ಪಾಲಂಕೃತ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಉತ್ಸವಮೂರ್ತಿ ತೆಪ್ಪೋತ್ಸವ ನಡೆಯಲಿದೆ. ಡಿ.2ರಂದು ನಂದಿವಾಹನ ಉತ್ಸವ ಹಾಗೂ ಶಯನೋತ್ಸವದೊಂದಿಗೆ ಚಿಕ್ಕಜಾತ್ರಾ ಮಹೋತ್ಸವ ಮಂಗಳ ಕಾಣಲಿದೆ.