ಮುಂಬೈ: ದೇಶದ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಭಾರತದ ಧೀಮಂತ ನಾಯಕ ಉದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ (ಅಕ್ಟೋಬರ್ 9) ಮುಂಬೈನ ಆಸ್ಪತ್ರೆಯಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರ ಸರಳತೆ ಮತ್ತು ವ್ಯಕ್ತಿತ್ವದಿಂದಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಮರರಾಗಿದ್ದಾರೆ. ಇಂದು ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಜನರು ಅವರಿಗೆ ವಿವಿಧ ರೀತಿಯಲ್ಲಿ ಸ್ಮರಿಸುತ್ತಿದ್ದಾರೆ. (Ratan Tata Letter)‘
ಇದನ್ನು ಓದಿ: Ratan Tata | ವಜ್ರದಲ್ಲಿ ಮೂಡಿಬಂದ ಧೀಮಂತ ನಾಯಕನ ಭಾವಚಿತ್ರ; ವಿಡಿಯೋಗೆ 5 ಮಿಲಿಯನ್ಗೂ ಹೆಚ್ಚು ಜನರ ಮೆಚ್ಚುಗೆ
ಈ ಮಧ್ಯೆ ಆರ್ಪಿಜಿ ಗ್ರೂಪ್ ಅಧ್ಯಕ್ಷ ಮತ್ತು ಉದ್ಯಮಿ ಹರ್ಷ್ ಗೋಯೆಂಕಾ ಅವರು 1996ರಲ್ಲಿ ಆಗ ಪ್ರಧಾನಮಂತ್ರಿಯಾಗಿದ್ದ ಪಿ.ವಿ ನರಸಿಂಹ ರಾವ್ ಅವರಿಗೆ ರತನ್ ಟಾಟಾ ಅವರು ಬರೆದಿದ್ದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದ್ಭುತ ವ್ಯಕ್ತಿಯ ಸುಂದರ ಕೈಬರಹ ಎಂದು ಶೀರ್ಷಿಕೆ ಬರೆದಿದ್ದಾರೆ.
1996ರಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸುಧಾರಣೆ ಮತ್ತು ಬದಲಾವಣೆಗಳನ್ನು ತಂದ ಮಾಜಿ ಪ್ರಧಾನಿ ನರಸಿಂಹ ರಾವ್ ಅವರನ್ನು ಭಾರತೀಯ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಕರೆಯಲಾಗುತ್ತದೆ. ನರಸಿಂಹ ರಾವ್ ಅವರು 1991 ರಿಂದ 1996 ರವರೆಗೆ ಭಾರತದ 9ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಪ್ರಮುಖ ಆರ್ಥಿಕ ಸುಧಾರಣೆಗಳು ಮತ್ತು ಸಾಮಾಜಿಕ ಸವಾಲುಗಳಿಂದ ತುಂಬಿತ್ತು. ಭಾರತದ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು.
ರತನ್ ಟಾಟಾ ಅವರು ಬರೆದಿರುವ ಪತ್ರದಲ್ಲಿ ಭಾರತಕ್ಕೆ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಆಗಿನ ಪ್ರಧಾನಿ ನರಸಿಂಹರಾವ್ ಅವರ ಸಾಧನೆಗೆ ಗೌರವವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಧೈರ್ಯ ಮತ್ತು ದೂರದೃಷ್ಟಿಯ ಚಿಂತನೆಗಾಗಿ ಪ್ರತಿಯೊಬ್ಬ ಭಾರತೀಯನೂ ನಿಮಗೆ ಋಣಿಯಾಗಿರುತ್ತಾನೆ ಎಂದು ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಪ್ರೀತಿಯ ಶ್ರೀ ನರಸಿಂಹ ರಾವ್, ಭಾರತದಲ್ಲಿ ಅನೇಕ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸುವಲ್ಲಿ ನಿಮ್ಮ ಸಾಧನೆಯನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಮತ್ತು ಗೌರವಿಸುತ್ತೇನೆ. ನಿಮ್ಮ ಸರ್ಕಾರ ಮತ್ತು ನೀವು ಭಾರತವನ್ನು ಆರ್ಥಿಕವಾಗಿ ವಿಶ್ವ ಭೂಪಟದಲ್ಲಿ ಇರಿಸಿದ್ದೀರಿ. ನೀವು ನಮ್ಮನ್ನು ಜಾಗತಿಕ ನಾಯಕರನ್ನಾಗಿ ಮಾಡಿದ್ದೀರಿ. ನಿಮ್ಮ ಸಾಧನೆಗಳು ಭಾರತದ ದೂರದೃಷ್ಟಿಯ ಚಿಂತನೆಗೆ ಮುಖ್ಯವೆಂದು ವೈಯಕ್ತಿಕವಾಗಿ ನಂಬಿದ್ದೇನೆ ಮತ್ತು ಅವುಗಳನ್ನು ಎಂದಿಗೂ ಮರೆಯಬಾರದು. ಇದು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದು ರತನ್ ಟಾಟಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರವನ್ನು 1996 ಆಗಸ್ಟ್ 27ರಂದು ಟಾಟಾ ಗ್ರೂಪ್‌ನ ಪ್ರಧಾನ ಕಚೇರಿಯಾದ ಬಾಂಬೆ ಹೌಸ್‌ನಲ್ಲಿ ಬರೆಯಲಾಗಿದೆ.(ಏಜೆನ್ಸೀಸ್)