ನ್ಯೂಸ್

ರತನ್ ಟಾಟಾ ನಿಧನ: ಟಾಟಾ ಸಮೂಹದ ಷೇರುಗಳ ಮೇಲೆ ಪರಿಣಾಮವೇನು? | TATA Group Shares

ನವದೆಹಲಿ: ಪದ್ಮವಿಭೂಷಣ, ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ರಕ್ತದೊತ್ತಡದಲ್ಲಿ ಹಠಾತ್ ಕುಸಿತದಿಂದಾಗಿ ನಿಧನರಾಗಿದ್ದಾರೆ. ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಇದು ದೇಶದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ. ಅವರು ಟಾಟಾ ಗ್ರೂಪ್‌ನ ವ್ಯವಹಾರವನ್ನು ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿದ್ದರು. ಅವರ ನಿಧನದ ನಂತರ ಟಾಟಾ ಗ್ರೂಪ್‌ನ ಪ್ರಮುಖ ಷೇರು(TATA Group Shares)ಗಳಲ್ಲಿ ಯಾವ ರೀತಿಯ ಚಲನೆ ಕಂಡುಬರುತ್ತಿದೆ ಎಂಬ ಕುತೂಹಲ ಮೂಡಿದೆ.

ಟಾಟಾ ಗ್ರೂಪ್‌ನ ಭಾಗವಾಗಿರುವ Tata Elxsi, ಆಟೋಮೋಟಿವ್, ಮಾಧ್ಯಮ, ಸಂವಹನ ಮತ್ತು ಆರೋಗ್ಯ ಸೇರಿದಂತೆ ಉದ್ಯಮಗಳಲ್ಲಿ ವಿನ್ಯಾಸ ಮತ್ತು ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತದೆ. ಟಾಟಾ ಗ್ರೂಪ್‌ನ ಈ ಪ್ರಮುಖ ಕಂಪನಿ ಗುರುವಾರ(ಅ.10)ಅದ್ಭುತ ಬೆಳವಣಿಗೆಯನ್ನು ಕಂಡಿದೆ. ದಿನದ ಆರಂಭದಲ್ಲಿಯೇ 4.84 ಪ್ರತಿಶತದಷ್ಟು ಜಿಗಿತದೊಂದಿಗೆ 7,982.60 ನಲ್ಲಿ ವಹಿವಾಟು ನಡೆಸುತ್ತಿದ್ದವು.

ಅದೇ ರೀತಿ ಟಾಟಾ ಪವರ್ ಕಂಪನಿಯೂ ಉತ್ತಮ ಬೆಳವಣಿಗೆ ಕಾಣುತ್ತಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಶೇ.2.68ರಷ್ಟು ಏರಿಕೆಯೊಂದಿಗೆ ಟಾಟಾ ಪವರ್ ಷೇರುಗಳು 473.20ರೂ. ನಲ್ಲಿ ವಹಿವಾಟು ನಡೆಸುತ್ತಿವೆ. ಇನ್ನು ಟಾಟಾ ಕೆಮಿಕಲ್ಸ್‌ನಲ್ಲಿ ಶೇ 5ರಷ್ಟು ಜಿಗಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ 5.35 ಶೇಕಡಾ ಏರಿಕೆಯಾಗಿ 1,164.45 ರೂ.ಗೆ ತಲುಪಿದೆ.

ಕುಸಿದ ಟಾಟಾ ಮೋಟಾರ್ಸ್‌ ಷೇರು: TATA Group Shares

ಕಳೆದ ಕೆಲವು ದಿನಗಳಿಂದ ಟಾಟಾ ಮೋಟಾರ್ಸ್ ಷೇರುಗಳು ಕುಸಿಯುತ್ತಿವೆ. ಆಟೋ ವಲಯದ ನಿರಂತರ ಮಂದಗತಿಯೇ ಇದಕ್ಕೆ ಪ್ರಮುಖ ಕಾರಣ. ಅವು 940 ರೂ. ನಲ್ಲಿ ವಹಿವಾಟು ನಡೆಸುತ್ತಿವೆ.