ನ್ಯೂಸ್

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್, ಅಶೋಕ ಹಾಲ್​ನ ಮರುನಾಮಕರಣ ಮಾಡಿದ ಸರ್ಕಾರ

ನವದಹೆಲಿ: ರಾಷ್ಟ್ರಪತಿ ಭವನದಲ್ಲಿರುವ ಇರುವ ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್ ಹೆಸರನ್ನು ಬದಲಾಯಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಗುರುವಾರ(ಜುಲೈ 25) ಮಾಹಿತಿ ನೀಡಿದೆ.

ರಾಷ್ಟ್ರಪತಿ ಭವನ-ಭಾರತದ ರಾಷ್ಟ್ರಪತಿಗಳ ಕಚೇರಿ ಮತ್ತು ನಿವಾಸ. ರಾಷ್ಟ್ರಪತಿ ಭವನ ದೇಶದ ಪ್ರತೀಕವಾಗಿದ್ದು, ಶ್ರೀಮಂತ ಪರಂಪರೆಯನ್ನು ಸೂಚಿಸುತ್ತದೆ. ರಾಷ್ಟ್ರಪತಿ ಭವನಕ್ಕೆ ಜನರ ಪ್ರವೇಶವನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದಲ್ಲದೆ ರಾಷ್ಟ್ರಪತಿ ಭವನದ ಗುರುತನ್ನು ಭಾರತೀಯ ಸಂಸ್ಕೃತಿಯ ಮೌಲ್ಯಗಳು ಮತ್ತು ಭಾವನೆಗಳೊಂದಿಗೆ ಜೋಡಿಸಲಾಗಿದೆ. ಈ ಕಲ್ಪನೆಯ ಆಧಾರದ ಮೇಲೆ, ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ಅನ್ನು ಈಗ ಗಣತಂತ್ರ ಮಂಟಪ ಮತ್ತು ಅಶೋಕ ಹಾಲ್​​ ಅನ್ನು ಅಶೋಕ ಮಂಟಪ ಎಂದು ಬದಲಾಯಿಸಲಾಗಿದೆ ಎಂದು ಅಧ್ಯಕ್ಷರ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗಣತಂತ್ರ ಮಂಟಪ ಮತ್ತು ಅಶೋಕ ಮಂಟಪ ಎಂದು ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತೋಷಪಟ್ಟಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದರ್ಬಾರ್ ಎಂಬ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷ್ ನ್ಯಾಯಾಲಯಗಳು ಮತ್ತು ಅಸೆಂಬ್ಲಿಗಳನ್ನು ಉಲ್ಲೇಖಿಸುತ್ತದೆ. ಭಾರತ ಈಗ ಗಣರಾಜ್ಯವಾಗಿದೆ. ಹೀಗಿರುವಾಗ ದರ್ಬಾರ್ ಎಂಬ ಪದ ಬಳಸುವುದು ಸರಿಯಲ್ಲ. ಭಾರತೀಯ ಸಮಾಜದಲ್ಲಿ ಗಣರಾಜ್ಯ ಪದದ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಬೇರೂರಿದೆ. ಆದ್ದರಿಂದ ಈಗ ಗಣತಂತ್ರ ಮಂಟಪ ಎಂದು ಬದಲಿಸಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಹೇಳಲಾಗಿದೆ.

ಅಶೋಕ ಎಂಬ ಪದವು ಯಾವುದೇ ದುಃಖವಿಲ್ಲದ ಅಥವಾ ಎಲ್ಲಾ ದುಃಖಗಳಿಂದ ಮುಕ್ತ, ಜತೆಗೆ ಅಶೋಕ ಎಂದರೆ ಅಶೋಕ ಚಕ್ರವರ್ತಿ, ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. ಅಶೋಕ ಸ್ತಂಭವು ಭಾರತ ಗಣರಾಜ್ಯದ ರಾಷ್ಟ್ರೀಯ ಸಂಕೇತವಾಗಿದೆ. ಅಶೋಕ ಸಭಾಂಗಣವನ್ನು ಅಶೋಕ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ. ಈ ಬದಲಾವಣೆ ಅಶೋಕ ಪದದೊಂದಿಗೆ ಸಂಬಂಧಿಸಿದ ಮೂಲ ಮೌಲ್ಯಗಳನ್ನು ಉಳಿಸಿಕೊಂಡು ಆಂಗ್ಲೀಕರಣದ ಸಂಸ್ಕೃತಿಯ ಕುರುಹುಗಳನ್ನು ತೆಗೆದುಹಾಕುತ್ತದೆ ಎಂದು ತಿಳಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಿಗೆ ದರ್ಬಾರ್ ಹಾಲ್ ಈಗಿನ ಗಣತಂತ್ರ ಮಂಟಪವನ್ನು ಬಳಸಲಾಗುತ್ತದೆ. ಇಲ್ಲಿ ರಾಷ್ಟ್ರೀಯ ಗೌರವಗಳನ್ನು ಸಹ ನೀಡಲಾಗುತ್ತದೆ. ಅಶೋಕಮಂಟಪವನ್ನು ಬಾಲ್ ರೂಂ ಆಗಿ ಬಳಸಲಾಗುತ್ತದೆ.(ಏಜೆನ್ಸೀಸ್​​)