ರಶ್ಮಿಕಾ ಮಂದಣ್ಣ 
ನ್ಯೂಸ್

ಇಬ್ಬರ ಸ್ಪರ್ಧೆ, ಮತ್ತೊಬ್ಬರಿಗೆ ಅವಕಾಶ?: ರುಕ್ಮಿಣಿ ವಸಂತ್, ಸಾಯಿ ಪಲ್ಲವಿ ಅಲ್ಲ ಎಂ.ಎಸ್.ಸುಬ್ಬಲಕ್ಷ್ಮೀ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

ಪ್ರಮುಖ ಮುಖ್ಯಾಂಶಗಳು

  • ಎಂ.ಎಸ್​.ಸುಬ್ಬಲಕ್ಷ್ಮೀ ಬಯೋಪಿಕ್ ಗೆ ಸಿದ್ಧತೆ
  • ಗಾಯಕಿಯ ಪಾತ್ರಕ್ಕೆ ಇಬ್ಬರು ನಟಿಯರ ಮಧ್ಯೆ ಸ್ಪರ್ಧೆ
  • ಸಾಯಿಪಲ್ಲವಿ ಬದಲಿಗೆ ರಶ್ಮಿಕಾಗೆ ಸಿಗುತ್ತಾ ಛಾನ್ಸ್​?
ಸಂಗೀತ ಸಾಮ್ರಾಜ್ಞೆ, ಭಾರತ ರತ್ನ ಪುರಸ್ಕೃತ ಎಂ.ಎಸ್.ಸುಬ್ಬಲಕ್ಷ್ಮೀ ಜೀವನಧಾರಿತ ಸಿನಿಮಾ ತೆರೆಮೇಲೆ ತರಲು ಸಿದ್ಧತೆಗಳು ನಡೆಯುತ್ತಿವೆ. ‘ಕಿಂಗ್ಡಮ್’ ನಿರ್ದೇಶಕ ಗೌತಮ್ ಈ ಬಯೋಪಿಕ್‌ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ತೆರೆಮರೆಯಲ್ಲಿ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಹಾಗಾದರೆ, ಎಂ.ಎಸ್. ಸುಬ್ಬಲಕ್ಷ್ಮೀ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ, ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇದೆ. ಮೊದಲಿನಿಂದಲೂ ಸಂಗೀತ ಸಾಮಾಜ್ಞೆಯ ಪಾತ್ರಕ್ಕೆ ಬಹುಭಾಷಾ ತಾರೆ ಸಾಯಿ ಪಲ್ಲವಿ ಹೆಸರು ಹೆಚ್ಚು ಕೇಳಿಬಂದಿತ್ತು. ನಟಿ ಕೂಡ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದು, ಜತೆಗೆ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ಎಂದು ವರದಿಯಾಗಿತ್ತು. ಸದ್ಯ ಸಾಯಿ ಪಲ್ಲವಿ ಬಹುನಿರೀಕ್ಷಿತ ‘ರಾಮಾಯಣ’ ಸೇರಿ ಕೆಲ ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ, ಅವರ ಬದಲು ‘ಕಾಂತಾರ’ ಕನಕವತಿ ರುಕ್ಮಿಣಿ ವಸಂತ್ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ರುಕ್ಮಿಣಿ ಹೆಸರು ಸಾಯಿ ಪಲ್ಲವಿಯಷ್ಟು ಹೆಚ್ಚು ದಿನ ಓಡಲಿಲ್ಲ. ಹಾಗಾಗಿ, ಪ್ರಾಜೆಕ್ಟ್ ತಡವಾದರೂ ಸಾಯಿ ಪಲ್ಲವಿಯೇ ಅಂತಿಮವಾಗಬಹುದು ಎನ್ನಲಾಗುತ್ತಿತ್ತು. ಹೀಗಿರುವಾಗಲೇ ಎಂ.ಎಸ್.ಸುಬ್ಬಲಕ್ಷ್ಮೀ ಪಾತ್ರಕ್ಕೆ ಇದೀಗ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದಿದೆ. ಇತ್ತೀಚೆಗೆ ಅವರ ಹೈದರಾಬಾದ್ ನಿವಾಸದಲ್ಲಿ ಲುಕ್ ಟೆಸ್ಟ್ ಕೂಡ ನಡೆಸಲಾಗಿದೆಯಂತೆ. ಹಾಗೆಯೇ, ಪಾತ್ರಕ್ಕಾಗಿ ಸಿದ್ಧತೆ ನಡೆಸುವಂತೆಯೂ ಅವರಿಗೆ ಚಿತ್ರತಂಡ ತಿಳಿಸಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತ ೋಷಣೆ ಮಾಡಿಲ್ಲವಷ್ಟೆ. -ಏಜೆನ್ಸೀಸ್


ಪ್ಯಾನ್ ಇಂಡಿಯಾ ಬೇಡಿಕೆ

ನಟ ವಿಜಯ್ ದೇವರಕೊಂಡ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕವೂ ನಟಿ ರಶ್ಮಿಕಾ ಮಂದಣ್ಣ ತೆಲುಗು, ಹಿಂದಿ ಸೇರಿ ಪರಭಾಷೆಗಳಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ಅವರ ಬಾಲಿವುಡ್ ಸಿನಿಮಾ ‘ಕಾಕ್‌ಟೇಲ್ 2’ ಇದೇ 19ಕ್ಕೆ ರಿಲೀಸ್ ಆಗುತ್ತಿದೆ. ಇನ್ನು ವಿಭಿನ್ನ ಲುಕ್ ಕಾಣಿಸಿಕೊಳ್ಳಲಿರುವ ‘ಮೈಸಾ’ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಪತಿ ವಿಜಯ್ ದೇವರಕೊಂಡಗೆ ಜೋಡಿಯಾಗಿರುವ ಐತಿಹಾಸಿಕ ‘ರಣಬಾಲಿ’ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಈ ಪ್ರಾಜೆಕ್ಟ್‌ಗಳ ಮಧ್ಯೆಯೇ ‘ಪುಷ್ಪ 3’, ‘ಅನಿಮಲ್ ಪಾರ್ಕ್’ ಲೈನಪ್‌ನಲ್ಲಿವೆ. ಸಾಮಾನ್ಯವಾಗಿ ಮದುವೆಯಾದ ಬಳಿಕ ನಟಿಯರಿಗೆ ಬೇಡಿಕೆ ಕಡಿಮೆಯಾಗುತ್ತದೆ ಎಂಬ ಮಾತನ್ನು ಸುಳ್ಳಾಗಿಸಿರುವ ರಶ್ಮಿಕಾ ಮದುವೆಯ ಬಳಿಕವೂ ಹೆಚ್ಚು ಬೇಡಿಕೆಯಲ್ಲಿದ್ದಾರೆ. ಸದ್ಯ ಅವರ ಕೈಯಲ್ಲಿ ಐದು ಸಿನಿಮಾಗಳಿದ್ದು, ಇದೀಗ ಎಂಎಸ್ ಸುಬ್ಬಲಕ್ಷ್ಮೀ ಬಯೋಪಿಕ್ ಕೂಡ ಅವರ ಕೈ ಸೇರಿದೆ.