ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಸಮಾರೋಪ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ!
ಗ್ಲಾಸ್ಗೋ: ಮುಂದಿನ ಕಾಮನ್ವೆಲ್ತ್ ಗೇಮ್ಸ್ ಭಾರತದಲ್ಲಿ 2030ರಲ್ಲಿ ನಡೆಯಲಿದೆ. ಹೀಗಾಗಿ ಈ ಸಲದ ಸಮಾರೋಪ ಸಮಾರಂಭದಲ್ಲಿ (ಆಗಸ್ಟ್ 2) ಭಾರತಕ್ಕೆ ಕಾಮನ್ವೆಲ್ತ್ ಧ್ವಜವನ್ನು ಹಸ್ತಾಂತರಿಸಲಾಗುತ್ತದೆ. ಈ ವೇಳೆ ನಡೆಯಲಿರುವ ಸಾಂಸತಿಕ ಮತ್ತು ಭಾರತಕ್ಕೆ ಕ್ರೀಡಾಪಟುಗಳನ್ನು ಸ್ವಾಗತಿಸುವ ಸಮಾರಂಭ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಗಾಯಕ ಶಂಕರ್ ಮಹಾದೇವನ್ ಕಾರ್ಯಕ್ರಮ ನೀಡಲಿದ್ದಾರೆ. ಸುಮಾರು 20 ನಿಮಿಷಗಳ ಕಾರ್ಯಕ್ರಮದಲ್ಲಿ ಭಾರತದ ಹಲವು ಕಲಾವಿದರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಮಾರಂಭದಲ್ಲಿ ಹಾಜರಿರುವ ನಿರೀಕ್ಷೆ ಇದೆ.
ಆರಂಭೋತ್ಸವಕ್ಕೆ ಪಾಪ್ ತಾರೆಯರ ಆಕರ್ಷಣೆ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಸಂಪೂರ್ಣವಾಗಿ ಒಳಾಂಗಣದಲ್ಲಿ ನಡೆಯಲಿದ್ದು, ಗುರುವಾರ ರಾತ್ರಿ ನಡೆಯಲಿರುವ ಸಮಾರಂಭಕ್ಕೆ ಸ್ಕಾಟಿಷ್ ಪಾಪ್ ಗಾಯಕಿ-ಸಂಗೀತ ನಿರ್ದೇಶಕಿ ಕೆ.ಟಿ. ಟನ್ಸ್ಟಾಲ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಟಾಮ್ ವಾಲ್ಕರ್, ಕ್ಯಾಲಮ್ ಬೀಟಿ, ನೀನಾ ನೆಸ್ಬಿಟ್, ನಾಥನ್ ಇವಾನ್ಸ್, ಸೇಂಟ್ ಫ್ನಾಕ್ಸ್ ಅವರ ಪ್ರದರ್ಶನಗಳೂ ನಡೆಯಲಿವೆ.
ಬ್ರಿಟನ್ ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಭಾಗವಹಿಸಲಿದ್ದಾರೆ. ಕಿಂಗ್ಸ್ ಬ್ಯಾಟನ್ ಸಂದೇಶವನ್ನು ಓದುವ ಮೂಲಕ ರಾಜರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಕ್ರೀಡಾಪಟುಗಳ ಪಥ ಸಂಚಲನವೂ ಇರಲಿದ್ದು, ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬಾಕ್ಸರ್ ಲವ್ಲಿನಾ ಬ್ಯಾಟನ್ ಹಿಡಿಯಲಿದ್ದಾರೆ.
*ಉದ್ಘಾಟನಾ ಸಮಾರಂಭ ಆರಂಭ: ರಾತ್ರಿ 10.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್.