ರಶ್ಮಿಕಾ ಮಂದಣ್ಣ 
ನ್ಯೂಸ್

ರಶ್ಮಿಕಾ ಹೊಸ ಸಾಹಸ : ಅಂಡರ್ ವಾಟರ್ ಶೂಟಿಂಗ್ ಮಾಡಿ, ಧೈರ್ಯ ಪ್ರದರ್ಶಿಸಿದ ನಟಿ

ಪ್ರಮುಖ ಮುಖ್ಯಾಂಶಗಳು

  • ನೀರಿನಾಳದಲ್ಲಿ ರಶ್ಮಿಕಾ ಸಾಹಸ
  • ಅಂಡರ್ ವಾಟರ್ ಶೂಟ್ ಮಾಡಿದ ಮೊದಲ ಮಹಿಳಾ ಸಿನಿಮಾ
  • ರಶ್ಮಿಕಾ ಧೈರ್ಯಕ್ಕೆ ಅಭಿಮಾನಿಗಳಿಂದ ಜೈಕಾರ
ಗ್ಲಾಮರ್ ರೋಲ್‌ಗಳಲ್ಲಿ ಮಿಂಚಿದ್ದ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ‘ಮೈಸಾ’ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿರುವುದು ಗೊತ್ತೇ ಇದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ನಲ್ಲಿ ನಟಿಯ ರಗಡ್ ಅವತಾರವನ್ನು ತೋರಿಸಲಾಗಿದ್ದು,ಈವರೆಗೆ ಎಂದೂ ಕಾಣದ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ಹೆಚ್ಚು ತಯಾರಿಬೇಕಿದ್ದು, ಆ್ಯಕ್ಷನ್-ದೃಶ್ಯಗಳಿಗಾಗಿ ಅಂತಾರಾಷ್ಟ್ರೀಯ ಸಾಹಸ ನಿರ್ದೇಶಕ ಆ್ಯಂಡಿ ಲಾಂಗ್ ಗರಡಿಯಲ್ಲಿ ರಶ್ಮಿಕಾ, ಮಾರ್ಷಲ್ ಆರ್ಟ್ಸ್, ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್ ಟ್ರೈನಿಂಗ್ ಸೇರಿ ಹಲವು ಸಮರ ಕಲೆಗಳನ್ನು ಕಲಿತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರಕ್ಕಾಗಿ ಮತ್ತೊಂದು ಹೊಸ ಸಾಹಸ ಮಾಡಿದ್ದಾರೆ. ಚಿತ್ರದ ಪ್ರಮುಖ ಸಾಹಸ ದೃಶ್ಯವನ್ನು ನೀರಿನಾಳದಲ್ಲಿ (ಅಂಡರ್ ವಾಟರ್) ಶೂಟಿಂಗ್ ಮಾಡಲಾಗಿದ್ದು, ಚಿತ್ರೀಕರಣದಲ್ಲಿ ನಟಿ ಪಾಲ್ಗೊಂಡು ಧೈರ್ಯ ಪ್ರದರ್ಶಿಸಿದ್ದಾರೆ. ಇಡೀ ಚಿತ್ರದಲ್ಲಿ ಈ ದೃಶ್ಯ ಹೈಲೈಟ್ ಆಗಲಿದೆ ಎಂದು ತಿಳಿದುಬಂದಿದೆ. ಇನ್ನು ಮಹಿಳಾ ಪ್ರಧಾನ ಸಿನಿಮಾವೊಂದು ಅಂಡರ್ ವಾಟರ್‌ನಲ್ಲಿ ಶೂಟಿಂಗ್ ಮಾಡಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಎಂದು ಚಿತ್ರತಂಡ ಹಂಚಿಕೊಂಡಿದೆ. ಹಾಗೆಯೇ, ಶೂಟಿಂಗ್ ದೃಶ್ಯಗಳನ್ನು ಚಿತ್ರತಂಡ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿವೆ. ರಶ್ಮಿಕಾ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ರವೀಂದ್ರ ಪುಲ್ಲೇ ನಿರ್ದೇಶನದ ‘ಮೈಸಾ’ ಚಿತ್ರವು ಇದೇ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. -ಏಜೆನ್ಸೀಸ್

ಎದುರಿಸಿದ ಸವಾಲಿನ ಕೆಲಸ

ಸದ್ಯ ಅಂಡರ್‌ವಾಟರ್ ದೃಶ್ಯದ ಶೂಟಿಂಗ್ ಪೂರ್ಣಗೊಂಡಿದ್ದು, ನಟಿ ರಶ್ಮಿಕಾ ಮಂದಣ್ಣ ಚಿತ್ರೀಕರಣದ ಅನುಭವದ ಬಗ್ಗೆ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ನಾನು ಸ್ವಲ್ಪ ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಾವು ಅಂಡರ್ ವಾಟರ್ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದೇವು. ಇದು ನನ್ನ ವೃತ್ತಿ ಜೀವನದಲ್ಲಿಯೇ ನಾನು ಎದುರಿಸಿದ ಅತ್ಯಂತ ಸವಾಲಿನ ಕೆಲಸ. ನಮಗೆ ನಮ್ಮ ಕೆಲಸದ ಬಗ್ಗೆ ಅತಿಯಾದ ಅಭಿಮಾನ, ಪ್ರೀತಿ. ಹಾಗಾಗಿಯೇ ನಾನು ಈ ಚಿತ್ರಕ್ಕಾಗಿ ಉತ್ಸುಕಳಾಗಿದ್ದೇನೆ’ ಎಂದು ಉದ್ಗರಿಸಿದ್ದಾರೆ.