ಪಾಲಕ್ಕಾಡ್: ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಜಾತಿಯ ಮಣ್ಣಿನ ಹಾವು ( Snake) ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಂಚಿಕೋಡ್‌ನ ಮಾಯಪಲ್ಲಂನಲ್ಲಿ ಪತ್ತೆಯಾಗಿದೆ. ಹಾವಿನ ಹೆಸರು ಕಾರ್ಡಮಮ್ ಶೀಲ್ಡ್ ಟೈಲ್.
ರೈತ ರಿಚರ್ಡ್ ಫ್ರಾನ್ಸಿಸ್ ಅವರ ಜಮೀನಿನಲ್ಲಿ ಈ ಹಾವು ಕಂಡುಬಂದಿದೆ. ಹಾವು ನೋಡಿದ ತಕ್ಷಣ ಫೋಟೋವನ್ನು ತೆಗೆದು ಉರಗ ರಕ್ಷಕ ಕೆ. ಮಾಯಿಲ್ಸಾಮಿ ಎಂಬುವರಿಗೆ ಕಳುಹಿಸಿದರು. ಬಳಿಕ ಮಾಯಿಲ್ಸಾಮಿ ಅವರು ಕೂಡಲೇ ಹಾವಿನ ಫೋಟೋವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದರು. ನಂತರ ನಡೆದ ತನಿಖೆಯಲ್ಲಿ ಇದು ಅಪರೂಪದ ಜಾತಿಯ ಮಣ್ಣಿನ ಹಾವು ಎಂದು ತಿಳಿದುಬಂದಿದೆ.
ಅಂದಹಾಗೆ, ಈ ಹಾವುಗಳು ನೆಲದಡಿಯಲ್ಲಿ ವಾಸಿಸುತ್ತವೆ ಮತ್ತು ವಿರಳವಾಗಿ ಹೊರಬರುತ್ತವೆ. ಹಾವು ಪತ್ತೆಯಾದ ಸ್ಥಳಕ್ಕೆ ಸ್ವಯಂಸೇವಕರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು. ಆದರೆ, ಆ ಹಾವು ಮತ್ತೆ ಸಿಗಲಿಲ್ಲ. ಬಹಶಃ ಆ ಹಾವು ನೆಲದಡಿಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ವಿಶೇಷ ಸಂಶೋಧನಾ ತಂಡವು ನಿಲಂಬೂರ್ ಪ್ರದೇಶದಲ್ಲಿ ಈ ಹಾವನ್ನು ಕಂಡುಹಿಡಿದಿತ್ತು.
1896 ರಲ್ಲಿ ಬೆಲ್ಜಿಯಂ-ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲೆಂಜರ್ ಆಗಿನ ತಿರುವಾಂಕೂರಿನ ಏಲಕ್ಕಿ ಕಾಡುಗಳಲ್ಲಿ ಈ ಹಾವನ್ನು ಕಂಡುಹಿಡಿದರು. ಬಳಿಕ ಸುಮಾರು 130 ವರ್ಷಗಳ ನಂತರ, ಈ ಜಾತಿಯ ಹಾವು ನಿಲಂಬೂರಿನಲ್ಲಿ ಕಂಡುಬಂದಿತು. ಇದರ ಬಗ್ಗೆ ಸಂಶೋಧನೆ ನಡೆಯುತ್ತಿರುವಾಗಲೇ ಕಂಚಿಕೋಡ್‌ನಲ್ಲಿ ಭೂಮಿಯ ಹಾವು ಪತ್ತೆಯಾಗಿದೆ.
ಪ್ರಾಣಿಶಾಸ್ತ್ರಜ್ಞ ಎಚ್.ಎಸ್. ಫರ್ಗುಸನ್ ಅವರ ಗೌರವಾರ್ಥವಾಗಿ ಈ ಹಾವಿಗೆ ರೈನೋಫಿಸ್ ಫರ್ಗುಸೋನಿಯಾನಸ್ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ. (ಏಜೆನ್ಸೀಸ್)