ವಾಷಿಂಗ್ಟನ್: ಹೊಸ ವ್ಯಾಪಾರ ಒಪ್ಪಂದದಡಿ ಅಮೆರಿಕವು ಚೀನಾದಿಂದ ಭೂಮಿಯೊಳಗಿನ ಅಪರೂಪದ ಖನಿಜಗಳು (ರೇರ್ ಅರ್ಥ್ ಮಟೀರಿಯಲ್ಸ್) ಮತ್ತು ಅಯಸ್ಕಾಂತಗಳನ್ನು (ಮ್ಯಾಗ್ನೆಟ್ಸ್) ಪಡೆಯಲಿದೆಯಲ್ಲದೆ, ಚೀನಾದ ವಸ್ತುಗಳ ಮೇಲಿನ ತೆರಿಗೆಯನ್ನು ಶೇಕಡ 55ಕ್ಕೆ ನಿಗದಿಪಡಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಅಮೆರಿಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಹಾಜರಾಗಲು ಚೀನಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದೂ ಸೇರಿದಂತೆ ‘ಒಪ್ಪಿಕೊಂಡಿದ್ದನ್ನು’ ಈಡೇರಿಸಲು ಅಮೆರಿಕ ಬದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಉಭಯ ದೇಶಗಳು ಲಂಡನ್ನಲ್ಲಿ ಮಂಗಳವಾರ ತಮ್ಮ ವ್ಯಾಪಾರ ಮಾತುಕತೆಯನ್ನು ಅಂತಿಮಗೊಳಿಸಿದ್ದು, ಖನಿಜ ಮತ್ತು ತಂತ್ರಜ್ಞಾನ ಪೂರೈಕೆ ಕುರಿತ ವಿವಾದವನ್ನು ಪರಿಹರಿಸಿಕೊಂಡಿವೆ ಎನ್ನಲಾಗಿದೆ. ಕಳೆದ ತಿಂಗಳು ಜಿನೀವಾದಲ್ಲಿ ಒಪ್ಪಂದ ಏರ್ಪಟ್ಟಿದ್ದರೂ, ನಂತರ ರೇರ್ ಅರ್ಥ್ ಮಟೀರಿಯಲ್ಸ್ ರಫ್ತು ಸಂಬಂಧ ಚೀನಾ ತಳೆದ ನಿರ್ಧಾರದಿಂದ ಮತ್ತೆ ಬಿಕ್ಕಟ್ಟು ತಲೆದೋರಿತ್ತು.
ಬಲವಂತದ ಗಣಿಗಾರಿಕೆ: ಈ ಮಧ್ಯೆ, ಚೀನಾದ ಜಿನ್ಜಿಯಾಂಗ್ ಪ್ರದೇಶದಲ್ಲಿ ಅಪರೂಪದ ಖನಿಜಗಳ ಗಣಿಗಾರಿಕೆಯಲ್ಲಿ ಮುಸ್ಲಿಂ ಉಯ್ಘರ್ಗಳು ಮತ್ತು ಟರ್ಕಿಶ್ ಅಲ್ಪಸಂಖ್ಯಾತರನ್ನು ಜೀತದಾಳುಗಳಂತೆ ಬಲವಂತವಾಗಿ ದುಡಿಸಿ ಶೋಷಣೆ ಮಾಡಲಾಗುತ್ತಿದೆ ಎಂದು ನೆದರ್ಲ್ಯಾಂಡ್ಸ್ ಮೂಲದ ಗ್ಲೋಬಲ್ ರೈಟ್ಸ್ ಕಂಪ್ಲಯನ್ಸ್ ಆರೋಪಿಸಿದೆ. ಇಂತಹ ಸ್ಥಳದಿಂದ ತೆಗೆಯಲಾದ ಟೈಟಾನಿಯಮ್ ಅನ್ನು ಏವನ್, ವಾಲ್ಮಾರ್ಟ್, ನೆಸ್ಕೆಫೆ, ಕೋಕಾಕೋಲಾದಂತಹ ಪ್ರಸಿದ್ಧ ಕಂಪನಿಗಳು ಬಳಸುತ್ತಿವೆ. ಅಲ್ಲಿಂದ ತೆಗೆದ ಲೀಥಿಯಮ್ ಬೆರಿಲಿಯಮ್ ಮ್ಯಾಗ್ನೇಸಿಯಂ ಅನ್ನು 77 ಚೀನಾ ಕಂಪನಿಗಳು ಜಗತ್ತಿನ ವಿವಿಧ ದೇಶಗಳಿಗೆ ಪೂರೈಸುತ್ತಿವೆ. ವೈಮಾನಿಕ, ವಾಹನ ಮತ್ತು ರಕ್ಷಣಾ ಉದ್ಯಮಗಳಿಗೆ ಬೇಕಾದ ಬಿಡಿಭಾಗ, ಪೇಂಟ್, ಥರ್ವಸ್ ಕಪ್ಗಳ ತಯಾರಿಕೆಯಲ್ಲಿ ಈ ಅಪರೂಪದ ಖನಿಜಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚೀನಾದಿಂದ ಇವುಗಳ ಖರೀದಿಯನ್ನು ಈ ಕಂಪನಿಗಳು ನಿಲ್ಲಿಸಬೇಕು ಎಂದು ಸಂಸ್ಥೆ ಆಗ್ರಹಿಸಿದೆ.
ರೇರ್ ಅರ್ಥ್ ಮ್ಯಾಗ್ನೆಟ್ ಪೂರೈಕೆಯಲ್ಲಿ ಆಗುತ್ತಿರುವ ಅಡಚಣೆ ಇನ್ನು 30 ದಿನ ಹೀಗೆಯೇ ಮುಂದುವರಿದರೆ, ಭಾರತದಲ್ಲಿ ವಾಹನಗಳ ಉತ್ಪಾದನೆ ಕುಂಠಿತವಾಗುತ್ತದೆ ಎಂದು ಕ್ರಿಸಿಲ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ. ಎಲೆಕ್ಟ್ರಿಕ್ ವಾಹನಗಳ ಹತ್ತಾರು ಹೊಸ ಮಾಡೆಲ್ಗಳ ಬಿಡುಗಡೆ ಸನ್ನಿಹಿತವಾಗಿರುವ ಸಮಯದಲ್ಲಿ ಚೀನಾ ರೇರ್ ಅರ್ಥ್ ಮ್ಯಾಗ್ನೆಟ್ಗಳ ಪೂರೈಕೆ ನಿಲ್ಲಿಸಿದೆ. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಕ್ರಿಸಿಲ್ ರೇಟಿಂಗ್ಸ್ನ ಹಿರಿಯ ನಿರ್ದೇಶಕ ಅನುಜ್ ಸೇಥಿ ತಿಳಿಸಿದ್ದಾರೆ.
ರೇರ್ ಅರ್ಥ್ ಮ್ಯಾಗ್ನೆಟ್ಗಳ ಪೂರೈಕೆ ನಿಲ್ಲಿಸಬಾರ ದೆಂದು ಆಗ್ರಹಿಸಲು ಭಾರತದ ವಾಹನೋದ್ಯಮದ ಪ್ರತಿನಿಧಿಗಳ ನಿಯೋಗವು ಚೀನಾಕ್ಕೆ ತೆರಳಲಿದೆ. ಇದರಲ್ಲಿ 40-50 ಕಂಪನಿಗಳ ಹಿರಿಯ ಅಧಿಕಾರಿಗಳಿರುತ್ತಾರೆ. ಚೀನಾದ ವಾಣಿಜ್ಯ ಸಚಿವಾಲಯದ ಒಪ್ಪಿಗೆಗಾಗಿ ಇವರು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏ. 4ರಿಂದ ಚೀನಾ ಈ ಖನಿಜಗಳ ಪೂರೈಕೆ ಮೇಲೆ ನಿರ್ಬಂಧ ವಿಧಿಸಿದೆ. ದೇಶದ ಅತಿ ದೊಡ್ಡ ಕಾರ್ ತಯಾರಕ ಕಂಪನಿಯಾದ ಮಾರುತಿ ಸುಜುಕಿ ಈಗಾಗಲೇ ತನ್ನ ವಾಹನಗಳ ಉತ್ಪಾದನೆ ಪ್ರಮಾಣವನ್ನು ಇದೇ ಸಮಸ್ಯೆಯಿಂದಾಗಿ ಕಡಿಮೆ ಮಾಡಿದೆ ಎಂದು ವರದಿಯಾಗಿದೆ.
ಈ ಆರೋಪವನ್ನು ಚೀನಾ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. ‘ಜಿನ್ಜಿಯಾಂಗ್ನ ಗಣಿ- ಕಾರ್ಖಾನೆಗಳಲ್ಲಿ ಯಾರನ್ನೂ ಬಲವಂತವಾಗಿ ದುಡಿಸಿಕೊಳ್ಳುತ್ತಿಲ್ಲ. ಚೀನಾವಿರೋಧಿಗಳು ನಡೆಸುತ್ತಿರುವ ಅಪಪ್ರಚಾರ ಇದು. ಚೀನಾದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಇಂತಹ ಸಂಸ್ಥೆಗಳು ನಿಲ್ಲಿಸಬೇಕು ಎಂದು ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ. ಈ ಹಿಂದೆ 2022ರಲ್ಲಿಯೂ ವಿಶ್ವಸಂಸ್ಥೆಯ ವರದಿಯೊಂದರಲ್ಲಿ ಚೀನಾದ ಮೇಲೆ ಇಂತಹುದೇ ಆರೋಪ ಹೊರಿಸಲಾಗಿತ್ತು. ಅದನ್ನು ಚೀನಾ ನಿರಾಕರಿಸಿತ್ತು. 2021ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಜಿನ್ಜಿಯಾಂಗ್ನಿಂದ ಆಮದು ನಿಲ್ಲಿಸುವ ಕಾಯ್ದೆಗೆ ಸಹಿ ಹಾಕಿದ್ದರು. ಅದನ್ನು ಟ್ರಂಪ್ ಇತ್ತೀಚೆಗೆ ವಿಸ್ತರಿಸಿದ್ದರು.
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಪ್ರಮುಖ ಬಿಡಿಭಾಗ ತಯಾರಿಕೆಯಲ್ಲಿ ಲೀಥಿಯಮ್ ಬಳಸಲಾಗುತ್ತದೆ. ವೈಮಾನಿಕ, ರಕ್ಷಣಾ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಬೆರಿಲಿಯಂ ಅನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಇಂತಹ ಪ್ರಮುಖ ಖನಿಜಗಳ ಮೂಲಗಳು ಚೀನಾ ಸೇರಿದಂತೆ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಇವೆ.