ನ್ಯೂಸ್

ಯೂಟ್ಯೂಬ್​ನಿಂದ ನಾಪತ್ತೆಯಾಗಿದ್ದ ಕೋಲುಮಂಡೆ ಸಾಂಗ್ ಬದಲಾವಣೆಯೊಂದಿಗೆ ಮರು ಬಿಡುಗಡೆ

ಬೆಂಗಳೂರು: ಸಾಕಷ್ಟು ವಿವಾದ ಸೃಷ್ಟಿಸಿದ ಬಳಿಕ ಯೂಟ್ಯೂಬ್​ನಿಂದ ಮಾಯವಾಗಿದ್ದ ಬಿಗ್​ಬಾಸ್​ ವಿಜೇತ್​ ಹಾಗೂ ರ‍್ಯಾಪರ್​ ಚಂದನ್​ ಶೆಟ್ಟಿಯವರ​ "ಕೋಲುಮಂಡೆ" ರ‍್ಯಾಪ್​ ಸಾಂಗ್ ಇದೀಗ ಮರುಬಿಡುಗಡೆಯಾಗಿದೆ.

ಆಗಸ್ಟ್​ 22 ರಂದು ಯೂಟ್ಯೂಬ್‌ನಲ್ಲಿ ಕೋಲುಮಂಡೆ ಸಾಂಗ್​ ಬಿಡುಗಡೆ ಮಾಡಲಾಗಿತ್ತು. ಹಾಡು ವೈರಲ್​ ಆದ ಬೆನ್ನಲ್ಲೇ ಹಾಡಿನ ಬಗ್ಗೆ ಚಾಮರಾಜನಗರದ ಜಾನಪದ ಕಲಾವಿದರು ಕಿಡಿಕಾರಿದ್ದರು.

ಮಾದಪ್ಪನ ಗೀತೆಯಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲತೆ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಹಾಡನ್ನು ಡಿಲೀಟ್​ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಚಂದನ್​ ಸಹ ಕ್ಷಮೆಯಾಚಿಸಿ, ಸ್ಪಷ್ಟನೆಯನ್ನು ನೀಡಿದ್ದ ಚಂದನ್​, ಈ ಸಾಂಗ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ ಎಂದು ಹೇಳಿದ್ದರು.

ಆದರೂ ಮಾದಪ್ಪನ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್​ನಿಂದ ಸಾಂಗ್​ ತೆಗೆದುಹಾಕಲಾಗಿತ್ತು. ಇದೀಗ ಯೂಟ್ಯೂಬ್​ನಲ್ಲಿ ಸಾಂಗ್​ ಮತ್ತೆ ಬಿಡುಗಡೆ ಮಾಡಲಾಗಿದೆ. ಆದರೆ, ಬದಲಾವಣೆ ಮಾಡಲಾಗಿದ್ದು, ಲಿರಿಕಲ್​ ವಿಡಿಯೋ ಸಾಂಗ್​ ಮಾತ್ರ ಮರುಬಿಡುಗಡೆ ಮಾಡಲಾಗಿದೆ. ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.