ಕೆ.ಆರ್.ನಗರ: ತಾಲೂಕು ಸರ್ಕಾರಿ ನೌಕರರ ಸಂಘದ 11 ನಿರ್ದೇಶಕ ಸ್ಥಾನಗಳಿಗೆ ಸೋಮವಾರ ಪಟ್ಟಣದ ಶಿಕ್ಷಣ ಇಲಾಖೆಯ ಬಿ.ಆರ್.ಸಿ ಕೇಂದ್ರದಲ್ಲಿ ಚುನಾವಣೆಯಲ್ಲಿ ಮತದಾನ ಅತ್ಯಂತ ಬಿರುಸಿನಿಂದ ನಡೆಯಿತು.
ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಸರ್ಕಾರಿ ನೌಕರ ಮತದಾರರು ಪಾಲ್ಗೊಂಡು ಅತ್ಯಂತ ಜಾಗರೂಕತೆಯಿಂದ ತಮ್ಮ ಹಕ್ಕು ಚಲಾಯಿಸಿದರು. 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅರಣ್ಯ, ಹಿಂದುಳಿದ ವರ್ಗಗಳ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ, ಕಂದಾಯ, ನ್ಯಾಯಾಂಗ, ಪ್ರಾಥಮಿಕ ಶಿಕ್ಷಣ, ಪ್ರೌಡಶಾಲೆ, ತಾಂತ್ರಿಕ ಶಿಕ್ಷಣ ಇಲಾಖೆಯ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಪ್ರಾಥಮಿಕ ಶಿಕ್ಷಣ ಇಲಾಖೆಯ 4 ಸ್ಥಾನಗಳಿಗೆ ನಡೆದ ಚುನಾವಣೆ ಅಖಾಡ ರಂಗೇರಿತ್ತು. ಎರಡು ಗುಂಪಿನಿಂದ 8 ಸದಸ್ಯರು ಸ್ಪರ್ಧಿಸಿದ್ದರು. ಮತದಾನ ಆರಂಭವಾದ ಕ್ಷಣದಿಂದ ಮುಗಿಯುವ ತನಕ ಮತಗಟ್ಟೆಯ ಮುಂದೆ ನಿಂತ ಸ್ಪರ್ದಾಕಾಂಕ್ಷಿಗಳು ಕಡೆಯ ಕ್ಷಣದ ಕಸರತ್ತು ನಡೆಸಿ ಮತದಾರರಿಗೆ ಮನವೊಲಿಸಲು ಹರಸಾಹಸಪಟ್ಟರು.
ಮತಗಟ್ಟೆಯಲ್ಲಿ ಮತದಾನ ಸಂಜೆ 4 ಗಂಟೆಗೆ ಮುಗಿದ ನಂತರ ಮತ ಎಣಿಕೆಯನ್ನು ಸಂಜೆ 5 ಗಂಟೆಗೆ ಪ್ರಾರಂಭಿಸಲಾಯಿತು. ಇದರಲ್ಲಿ ಆಯ್ಕೆಯಾದ ಇಲಾಖಾವಾರು ಚುನಾವಣಾಧಿಕಾರಿ ಬಿಆರ್‌ಸಿ ವೆಂಕಟೇಶ್ ಅವರು ಫಲಿತಾಂಶ ಪ್ರಕಟಿಸಿದರು. ಸಹಾಯಕರಾದ ಸುಬ್ಬುರಾಮ್, ಸಿಬ್ಬಂದಿ ಹರಿಪ್ರಸಾದ್, ಮಂಜು, ಉದಯ್‌ಕುಮಾರ್ ಸಹಕಾರ ನೀಡಿದರು.
ಅರಣ್ಯ ಇಲಾಖೆ: ಎಂ.ಎಸ್.ಮಹದೇವ 6 ಮತಗಳನ್ನು ಪಡದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಮಂಜುನಾಥ್ 3 ಮತಗಳನ್ನು ಪಡೆದು ಪರಾಭವಗೊಂಡರು.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ: ಎಚ್.ವಿ.ಶಶಿಧರ್ 8 ಮತಗಳನ್ನು ಪಡೆದು ಜಯಶಾಲಿಯಾದರೆ ಪ್ರತಿಸ್ಪರ್ಧಿಗಳಾದ ರಾಘವೇಂದ್ರ (7), ಜಿ.ಜೆ.ಶಂಕರ್(2) ಪರಾಭವಗೊಂಡರು.
ಬಿಸಿಎಂ ಇಲಾಖೆ: ಜಿ.ಜೆ.ಮಹೇಶ್ 23 ಮತ ಪಡೆದು ಗೆಲುವು ಸಾಧಿಸಿದರೆ ಮಧುಸೂದನ್ 21 ಮತಗಳನ್ನು ಗಳಿಸಿ ಪರಾಭವಗೊಂಡರು.
ತಾಂತ್ರಿಕ ಶಿಕ್ಷಣ,(ಡಿಪ್ಲೊಮಾ) ಇಲಾಖೆ: ಇ.ವಸಂತಕುಮಾರ್ 23 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಎಂ.ಎಸ್.ರಮೇಶ್ 20 ಮತಗಳನ್ನು ಪಡೆದು ಪರಾಭವಗೊಂಡರು.
ನ್ಯಾಯಾಂಗ ಇಲಾಖೆ: ಎನ್.ವಿ.ತುಳಸಿ 35 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಪವನ್‌ಕುಮಾರ್ 30 ಮತಗಳನ್ನು ಪಡೆದು ಪರಾಭವಗೊಂಡರು.
ಕಂದಾಯ ಇಲಾಖೆ: ಎಸ್.ಶಶಿಕಾಂತ್ 52 ಮತ ಪಡೆದು ಗೆಲುವಿನ ನಗೆ ಬೀರಿದರೆ ಪ್ರತಿಸ್ಪರ್ಧಿ ರವೀಂದ್ರರಾವ್ 38 ಮತಗಳನ್ನು ಪಡೆದು ಪರಾಭವಗೊಂಡರು.
ಪ್ರಾಥಮಿಕ ಶಾಲಾ ಶಿಕ್ಷಣ ವಿಭಾಗ; ರಾಜಶೇಖರ್ 313, ಶಂಕರೇಗೌಡ 305, ಪೂರ್ಣಿಮಾ 290, ಬಿ.ಎಲ್.ಮಹದೇವ 282 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರು. ಎಚ್.ಟಿ.ಪಾಂಡು 250, ಎಂ.ನಾಗರಾಜು 263, ಕೆ.ಎಂ.ಮಂಜುನಾಥ್ 220, ರಾಜೇಶ್ವರಿ 249 ಮತಗಳನ್ನು ಪಡೆದು ಪರಾಭವಗೊಂಡರು.