ನ್ಯೂಸ್

ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿ ಗರ್ಭೀಣಿ ಮಾಡಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.

ಸಿಂಗಾಪುರ ರಸ್ತೆ ವಿನಾಯಕನಗರ ನಿವಾಸಿ ಸಂತೋಷ ಕುಮಾರ್ (21) ಅಪರಾಧಿ. 20 ವರ್ಷ ಜೈಲು, 75 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎನ್.ಎಂ. ರಮೇಶ್ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ಸಂತ್ರಸ್ತೆ ಪರ ವಾದ ಮಂಡಿಸಿದ್ದರು.

16 ವರ್ಷದ ನೊಂದ ಬಾಲಕಿ, ತನ್ನ ತಾಯಿ ಜತೆಗೆ ನೆಲೆಸಿದ್ದಳು. ಸಮೀಪದಲ್ಲಿಯೇ ವಾಸವಾಗಿದ್ದ ಸಂತೋಷ್, ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. 2022ರ ಅಕ್ಟೋಬರ್‌ನಲ್ಲಿ ತನ್ನ ತಾಯಿ ಮಾತನಾಡಿಸಬೇಕಂತೆ ಮನೆಗೆ ಬಾ ಎಂದು ಬಾಲಕಿಯನ್ನು ಕರೆದೊಯ್ದು ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಡಿಸೆಂಬರ್‌ನಲ್ಲಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭೀಣಿ ಎಂದು ಸಾಬೀತಾಗಿತ್ತು.

ಈ ಬಗ್ಗೆ ನೊಂದ ಬಾಲಕಿ ತಾಯಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣೆ ಇನ್‌ಸ್ಪೆಕ್ಟರ್ ಸುಂದರ್, ಅಪರಾಧಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಅಂತಿಮ ತೀರ್ಪು ಪ್ರಕಟಿಸಿದೆ. ಇದೇ ವೇಳೆ ನೊಂದ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ 2 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.