ಪುಣೆ: ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ರಣಜಿ ಟ್ರೋಫಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಮಹಾರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಉಪಯುಕ್ತ ಮುನ್ನಡೆ ಸಾಧಿಸಿದೆ. ನಂತರ ಎರಡನೇ ಸರದಿಯಲ್ಲಿ ನಾಯಕ ಮಯಾಂಕ್ ಅಗರ್ವಾಲ್ (64* ರನ್, 145 ಎಸೆತ, 6 ಬೌಂಡರಿ) ದಿಟ್ಟ ಆಟದ ನಡುವೆ ಮಹಾರಾಷ್ಟ್ರ ತಂಡ ತಿರುಗೇಟು ನೀಡಿದೆ. ಪಂದ್ಯದ 4ನೇ ಹಾಗೂ ಅಂತಿಮ ದಿನ ಉಭಯ ತಂಡಗಳು ಪೂರ್ಣ ಆರು ಅಂಕ ಪಡೆಯಲು ಸೆಣಸುವ ನಿರೀಕ್ಷೆ ಇದ್ದು, ಕುತೂಹಲ ಕೆರಳಿಸಿದೆ.
ಎಂಸಿಎ ಕ್ರೀಡಾಂಗಣದಲ್ಲಿ ನಡೆಯುುತ್ತಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಸೋಮವಾರ 6 ವಿಕೆಟ್‌ಗೆ 200 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಮಹಾರಾಷ್ಟ್ರ ತಂಡ ಭರ್ತಿ 100 ರನ್ ಸೇರಿಸಿ 99.2 ಓವರ್‌ಗಳಲ್ಲಿ 300 ರನ್‌ಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು. 13 ರನ್‌ಗಳ ಅಲ್ಪ ಮುನ್ನಡೆ ಪಡೆದ ಕರ್ನಾಟಕ ತಂಡ, ಮಯಾಂಕ್-ಅನೀಶ್ (17) ನೀಡಿದ ಉತ್ತಮ ಆರಂಭದ ಹೊರತಾಗಿಯೂ ದಿನದಂತ್ಯಕ್ಕೆ ಎಡಗೈ ವೇಗಿ ಮುಕೇಶ್ ಚೌಧರಿ (70ಕ್ಕೆ 3) ದಾಳಿಗೆ ಕುಸಿದು ಎರಡನೇ ಸರದಿಯಲ್ಲಿ 49.4 ಓವರ್‌ಗಳಲ್ಲಿ 5 ವಿಕೆಟ್‌ಗೆ 144 ರನ್ ಕಲೆಹಾಕಿದೆ. ಮಯಾಂಕ್ ಅಜೇಯ ಅರ್ಧಶತಕದೊಂದಿಗೆ ಅಂತಿಮ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದು, ಕರ್ನಾಟಕ ಸದ್ಯ 157 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೂ ಕನಿಷ್ಠ 100 ರನ್ ಸೇರಿಸಿದರಷ್ಟೇ ಸೋಲಿನ ಭೀತಿಯಿಂದ ಪಾರಾಗಬಹುದು.
ಮಹಾರಾಷ್ಟ್ರ ತಂಡ ಮಂಗಳವಾರ ಬೆಳಗ್ಗೆ ಕರ್ನಾಟಕ ತಂಡವನ್ನು ಬೇಗನೆ ಆಲೌಟ್ ಮಾಡಿದರೆ ಗೆಲುವು ಒಲಿಸಿಕೊಳ್ಳುವ ಅವಕಾಶ ಹೊಂದಿದೆ. ಪಂದ್ಯ ಡ್ರಾಗೊಂಡರೆ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮಯಾಂಕ್ ಪಡೆ ಕನಿಷ್ಠ ಮೂರು ಅಂಕ, ಜಯ ಸಾಧಿಸಿದರೆ ಗರಿಷ್ಠ 6 ಅಂಕ ಪಡೆಯಲಿದೆ.
ಕರ್ನಾಟಕ: 313 ಹಾಗೂ 49.4 ಓವರ್‌ಗಳಲ್ಲಿ 5 ವಿಕೆಟ್‌ಗೆ 144 (ಅನೀಶ್ ಕೆವಿ 17, ಮಯಾಂಕ್ ಅಗರ್ವಾಲ್ 64*, ಕೆಎಲ್ ಶ್ರೀಜಿತ್ 29, ಕರುಣ್ ನಾಯರ್ 15, ಸ್ಮರಣ್ ಆರ್. 4, ಅಭಿಲಾಷ್ ಶೆಟ್ಟಿ 4, ಮುಕೇಶ್ ಚೌಧರಿ 70ಕ್ಕೆ 3, ವಿಕಿ 18ಕ್ಕೆ 1). ಮಹಾರಾಷ್ಟ್ರ: 99.2 ಓವರ್‌ಗಳಲ್ಲಿ 300 (ಜಲಜ್ 72, ವಿಕಿ ಓಸ್ವಾಲ್ 20, ರಾಮಕೃಷ್ಣ 36, ಗುರ್ಬನಿ 1, ಶ್ರೇಯಸ್ ಗೋಪಾಲ್ 70ಕ್ಕೆ 4, ಮೊಹ್ಸಿನ್ 64ಕ್ಕೆ 3, ವಿದ್ವತ್ 74ಕ್ಕೆ 2).
ಅಲ್ಪ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಮಯಾಂಕ್ ಹಾಗೂ ಅನೀಶ್ ಕರ್ನಾಟಕಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 87 ಎಸೆತಗಳಲ್ಲಿ 50 ರನ್ ಸೇರಿಸಿದರು. ಮಯಾಂಕ್ ಜತೆಯಾಗಿ ಎರಡನೇ ವಿಕೆಟ್‌ಗೆ ಕೆಎಲ್ ಶ್ರೀಜಿತ್ (48) 123 ಎಸೆತಗಳಲ್ಲಿ 48 ರನ್‌ಗಳಿಸಿ, ಮುನ್ನಡೆಯನ್ನು 100ಕ್ಕೆ ವಿಸ್ತರಿಸಿದರು. ನಂತರ ಮಯಾಂಕ್ ಜತೆಗೂಡಿದ ಕರುಣ್ ನಾಯರ್ (15) ಸತತ 2ನೇ ಇನಿಂಗ್ಸ್‌ನಲ್ಲೂ ನಿರಾಸೆಗೊಳಿಸಿದರು.
ಈ ಜೋಡಿ 60 ಎಸೆತಗಳಲ್ಲಿ 60 ರನ್‌ಗಳಿಸಿತು. ಮಯಾಂಕ್ ಸತತ ಎರಡನೇ ಅರ್ಧಶತಕ ಸಿಡಿಸಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ದಿನದಂತ್ಯದಲ್ಲಿ ಆರ್. ಸ್ಮರಣ್ (4) ಹಾಗೂ ನೈಟ್‌ವಾಚ್‌ಮನ್ ಅಭಿಲಾಷ್ ಶೆಟ್ಟಿ (9) ವಿಕೆಟ್ ಪಡೆದ ಮುಕೇಶ್-ಜಲಜ್ ಜೋಡಿ ಮಹಾರಾಷ್ಟ್ರಕ್ಕೆ ಜಯದ ಆಸೆ ಹುಟ್ಟಿಸಿದೆ.
113 ರನ್‌ಗಳ ಹಿನ್ನಡೆಯೊಂದಿಗೆ ಬೆಳಗ್ಗೆ ಆಟ ಆರಂಭಿಸಿದ ಮಹಾರಾಷ್ಟ್ರಕ್ಕೆ ತಂಡಕ್ಕೆ ವಲಸೆ ಆಟಗಾರ ಜಲಜ್ ಸಕ್ಸೇನಾ (73 ರನ್, 147 ಎಸೆತ, 10 ಬೌಂಡರಿ) ಹಾಗೂ ವಿಕಿ ಓಸ್ವಾಲ್ (20) ಜೋಡಿ ಮುನ್ನಡೆಯ ಹೋರಾಟಕ್ಕೆ ತುಂಬಿತು. ಬೌಲಿಂಗ್ ಬಳಿಕ ಬ್ಯಾಟಿಂಗ್‌ನಲ್ಲೂ ರಾಜ್ಯ ತಂಡಕ್ಕೆ ಜಲಜ್ ಸವಾಲೆನಿಸಿದರು. ವಿದ್ವತ್ ಕಾವೇರಪ್ಪ ಎಸೆತದಲ್ಲಿ ಸ್ಲಿಪ್‌ನಲ್ಲಿ ಸ್ಮರಣ್, ಓಸ್ವಾಲ್ ಕ್ಯಾಚ್ ಪಡೆದು ಜತೆಯಾಟ ಮುರಿದರು.
ನಂತರ ಕವರ್ಸ್‌ನಲ್ಲಿ ಜಲಜ್ ಅವರ ಅದ್ಬುತ ಕ್ಯಾಚ್ ಪಡೆದ ಮೊಹ್ಸಿನ್ ಖಾನ್ ಪಂದ್ಯಕ್ಕೆ ತಿರುವು ನೀಡಿದರು. ರಜನೀಶ್ ಗುರ್ಬನಿ (1) ಸ್ಲಿಪ್‌ನಲ್ಲಿ ಕರುಣ್‌ಗೆ ಕ್ಯಾಚ್ ನೀಡಿದರೆ, ರಾಮಕೃಷ್ಣರನ್ನು (36) ರನೌಟ್ ಮಾಡಿದ ಅಭಿನವ್ ಭೋಜನ ವಿರಾಮಕ್ಕೆ ಮುನ್ನ ಕರ್ನಾಟಕ್ಕೆ ಮಹತ್ವದ ಮುನ್ನಡೆ ಖಾತ್ರಿಪಡಿಸಿದರು.