ಶಿವಮೊಗ್ಗ: ನಗರ ಪಾಲಿಕೆಯಿಂದ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಸೆ.24ರಿಂದ 28ರವರೆಗೆ ರಂಗದಸರಾವನ್ನು ವಿಭಿನ್ನವಾಗಿ ಆಯೋಜಿಸಲಾಗುತ್ತಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ರಂಗ ದಸರಾದಲ್ಲಿ 30 ನಾಟಕ ತಂಡಗಳು 43 ಪ್ರದರ್ಶನಗಳನ್ನು ನೀಡಲಿವೆ. ರಂಗಗೀತೆ ಹಾಗೂ ಉಪನ್ಯಾಸ ಸೇರಿ 50ಕ್ಕೂ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 300 ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳು ರಂಗ ದಸರಾದಲ್ಲಿ ಭಾಗವಹಿಸುತ್ತಿವೆ. ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗಿದೆ. 15 ಕುಟುಂಬಗಳ ಮನೆಗಳ ಬಳಿಯೇ ನಾಟಕ ಪ್ರದರ್ಶನವಿರುತ್ತದೆ. ಇವುಗಳಲ್ಲಿ ಆಯ್ಕೆಮಾಡಿದ ನಾಲ್ಕು ನಾಟಕಗಳನ್ನು ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು. ಕರ್ತವ್ಯರಂಗ ಎಂಬ ನೂತನ ಕಾರ್ಯಕ್ರಮವನ್ನು ಈ ಬಾರಿ ರಂಗ ದಸರಾದಲ್ಲಿ ಸೇರಿಸಲಾಗಿದೆ. ವಾಹನ ಮಾರುಕಟ್ಟೆ, ರಿಪೇರಿ ಕ್ಷೇತ್ರ, ಶಿಕ್ಷಕರು, ಅಲೆಮಾರಿ ಸಮುದಾಯಗಳಿಗೆ ಒಂದು ಕಿರುನಾಟಕ ಕಲಿಸಲಾಗುತ್ತದೆ ಎಂದರು.
ಸೆ.24ರ ಬೆಳಗ್ಗೆ 10.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗನಿರ್ದೇಶಕ ಗಣೇಶ್ ಮಂದಾರ್ತಿ ರಂಗದಸರಾ ಉದ್ಘಾಟಿಸಲಿದ್ದಾರೆ. ಬಳಿಕ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ ಮೂರು ನಾಟಕಗಳು ಪ್ರದರ್ಶನವಾಗಲಿವೆ. ಬಾಪೂಜಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ತಂಡವು ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕವನ್ನು ಪ್ರಸ್ತುತಪಡಿಲಿದ್ದಾರೆ ಎಂದು ತಿಳಿಸಿದರು.
25ರಂದು ನಗರದ ವಿವಿಧ ಸ್ಥಳಗಳಲ್ಲಿ ಬೀದಿ ನಾಟಕಗಳಿರುತ್ತವೆ. ಸಂಜೆ 6ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ತವ್ಯರಂಗ ಕಾರ್ಯಕ್ರಮವಿರುತ್ತದೆ. ಸಂಜೆ 6.30ಕ್ಕೆ ಪೊಲೀಸ್ ಸಮುದಾಯ ಭವನದಲ್ಲಿ ರಂಗಗೀತೆ ಕಾರ್ಯಕ್ರಮವಿದೆ. ಇದನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
26ರಂದು ವಿವಿಧೆಡೆ ಬೀದಿ ನಾಟಕ ಪ್ರದರ್ಶನವಿದೆ. ಸಂಜೆ ಕುವೆಂಪು ರಂಗಮಂದಿರದಲ್ಲಿ ರಂಗಪರಿಕರಗಳ ಪ್ರದರ್ಶನ, ನಾಟಕ ಪ್ರದರ್ಶನವಿದೆ. 27ರಂದೂ ವಿವಿಧೆಡೆಗಳಲ್ಲಿ ಬೀದಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ವಿಶ್ವಾಮಿತ್ರ-ಮೇನಕೆ ಡ್ಯಾನ್ಸ್ ಮಾಡೋದು ಏಕೆ? ಎಂಬ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.
ಸೆ.28ರ ಸಂಜೆ ರಾವೀ ನದಿ ದಂಡೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.30ರ ಸಂಜೆ 6ಕ್ಕೆ ಸಮಾರೋಪ ನಡೆಯಲಿದೆ. ಅಂದು ಡಾ.ಚಂದ್ರಶೇಖರ್ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವಾಗಲಿದೆ ಎಂದರು.
ರಂಗದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್.ಮಧುನಾಯಕ್, ರಂಗನಿರ್ದೇಶಕ ಆರ್.ಎಸ್.ಹಾಲಸ್ವಾಮಿ, ಸುರೇಶ್, ಮಂಜುನಾಥ್, ಅಭಿ, ಚಂದನ್ ಸುದ್ದಿಗೋಷ್ಟಿಯಲ್ಲಿದ್ದರು.