ರಾಣೆಬೆನ್ನೂರ: ರಾಜ್ಯದಲ್ಲಿರುವ ನೇಕಾರರನ್ನು ಗುರುತಿಸುವ ಸಲುವಾಗಿ ರಾಜ್ಯ ನೇಕಾರರ ಒಕ್ಕೂಟದಿಂದ ಆ್ಯಪ್ವೊಂದನ್ನು ಸಿದ್ಧಪಡಿಸಿದ್ದು ರಾಜ್ಯದ ಜನತೆ ಅದರ ಮೂಲಕ ತಮ್ಮ ಕುಟುಂಬದವರ ಮಾಹಿತಿ ನೀಡಬೇಕು ಎಂದು ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ ತಿಳಿಸಿದರು.
ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನೇಕಾರರ ಜನಜಾಗೃತಿ ಸಭೆ ಮತ್ತು ಜಾತಿ ಗಣತಿ ಆ್ಯಪ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ನೇಕಾರ ಸಮುದಾಯದವರ ಅಂಕಿ ಸಂಖ್ಯೆಗಳು ವ್ಯತ್ಯಾಸ ಆಗಿವೆ. ಆದ್ದರಿಂದ ಸರ್ಕಾರಕ್ಕೆ ಸರಿಯಾದ ಅಂಕಿ ಅಂಶ ನೀಡುವ ಸಲುವಾಗಿ ಪ್ರತಿ ವಿಧಾನಸಭೆವಾರು ಜಾತಿ ಗಣತಿ ಸಮೀಕ್ಷೆ ನಡೆಸುವ ಉದ್ದೇಶದಿಂದ ಸಮಾಜದಿಂದ ಆ್ಯಪ್ವೊಂದನ್ನು ಸಿದ್ಧಪಡಿಸಲಾಗಿದೆ. ಅದರಂತೆ ಸಮಾಜದ ಜನತೆ ಅದರ ಮೂಲಕ ತಮ್ಮ ಕುಟುಂಬದವರ ಮಾಹಿತಿ ನೀಡಬೇಕು ಎಂದರು.
ರಾಜ್ಯದಲ್ಲಿ ನೇಕಾರ ಸಮುದಾಯದ ಜನಸಂಖ್ಯೆ 10ನೇ ಸ್ಥಾನದಲ್ಲಿದೆ. ಆದರೂ ನೇಕಾರ ಸಮುದಾಯದವರು ಇಂದಿಗೂ ಶಾಸಕ, ಸಂಸದ ಸೇರಿ ಯಾವುದೆ ರಾಜಕೀಯ ಅಧಿಕಾರ, ಹುದ್ದೆಯಲ್ಲಿಲ್ಲ. ಈ ನಿಟ್ಟಿನಲ್ಲಿ ನೇಕಾರ ಸಮುದಾಯದ ಎಲ್ಲ ಮಠಾಧೀಶರು, ಒಳ ಪಂಗಡಗಳು ಸೇರಿ ರಾಜ್ಯ ಸರ್ಕಾರಕ್ಕೆ ಇದರ ಗಮನಕ್ಕೆ ತರಬೇಕಿದೆ.
ಸರ್ಕಾರದಿಂದ ಸೌಲಭ್ಯ ಪಡೆಯಲು ಜಾತಿ ಗಣತಿ ಮುಖ್ಯವಾಗಿದೆ. ಆದ್ದರಿಂದ ಸಮಾಜದವರು ತಮ್ಮ ಬಗ್ಗೆ ನೋಂದಣಿ ಮಾಡಿಸುವ ಮೂಲಕ ಅಧಿಕೃತ ಮಾಹಿತಿ ನೀಡಬೇಕು. ಇದನ್ನು ರಾಜ್ಯದ ಸಿಎಂ, ಡಿಸಿಎಂ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪದ್ಮಸಾಲಿ ಸಮಾಜದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ರಮೇಶ ಗುತ್ತಲ, ಡಾ. ಬಸವರಾಜ ಕೇಲಗಾರ, ವಿಠ್ಠಲ ಎಡಕೆ, ಹನುಮಂತಪ್ಪ ಮುಕ್ತೇನಹಳ್ಳಿ, ದಯಾನಂದ ಚಂಡಿಗಡ, ಕೃಷ್ಣಪ್ಪ ಬ್ಯಾಡಗಿ, ನಾಗರಾಜ ಅಡಿಗ, ಪ್ರವಿಣ ಕೋಪರ್ಡೆ, ಪಾಂಡಪ್ಪ ಪೂಜಾರ, ಶಶಿಕಲಾ ಬಂಡೇಕಲ್ಲ, ವೀರೇಂದ್ರ ಮಲ್ಲಾಪುರ, ಮಾರುತಿ ಗರಡಿಮನಿ ಮತ್ತಿತರರು ಉಪಸ್ಥಿತರಿದ್ದರು.