ರಾಣೆಬೆನ್ನೂರ: ಸ್ವಾತಂತ್ರೃ ಸಂಗ್ರಾಮ ಸಮಯದಲ್ಲಿ ದೇಶದ ಸ್ವಾತಂತ್ರೃಕ್ಕಾಗಿ ಬಹುಮುಖ್ಯ ಪಾತ್ರ ವಹಿಸಿದ್ದ ಪತ್ರಿಕಾರಂಗ ಇಂದಿಗೂ ಸಮಾಜದಲ್ಲಿ ಅನೇಕ ಸಮಸ್ಯೆ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸುತ್ತಿವೆ ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.
ನಗರದ ಬಿಎಜೆಎಸ್‌ಎಸ್ ಪದವಿ ಕಾಲೇಜ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಬಹುತೇಕ ಪತ್ರಿಕೆಗಳು ಎಡ ಪಂಥಿ ಹಾಗೂ ಬಲ ಪಂಥಿಯ ವಿಚಾರಧಾರೆಗಳನ್ನು ಹೊಂದಿದ್ದು, ಅವುಗಳನ್ನು ಓದುಗರ ಮೇಲೆ ಹೇರುವ ಕೆಲಸ ಮಾಡುತ್ತಿವೆ. ಹೀಗಾಗಿ ಇಂದಿನ ಪತ್ರಕರ್ತರ ಮೇಲೆ ಜನರಿಗೆ ವಸ್ತುನಿಷ್ಟ ವರದಿಯನ್ನು ತಲುಪಿಸುವ ಗುರುತರ ಸವಾಲು ಹಾಗೂ ಜವಾಬ್ದಾರಿಯಿದೆ ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ, ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಮಾತನಾಡಿದರು. ತಾಲೂಕು ಕಾನಿಪ ಸಂಘದ ಅಧ್ಯಕ್ಷ ಎಸ್.ಟಿ. ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾನಿಪ ಅಧ್ಯಕ್ಷ ನಾಗರಾಜ ಕುರವತ್ತೇರ, ಕಾರ್ಯದರ್ಶಿ ವೀರೇಶ ಮಡ್ಲೂರ, ಖಜಾಂಚಿ ನಾರಾಯಣ ಹೆಗಡೆ, ನಗರಸಭೆ ಸದಸ್ಯರಾದ ಮಂಜುಳಾ ಹತ್ತಿ, ಮಲ್ಲಿಕಾರ್ಜುನ ಅಂಗಡಿ, ಪ್ರಮುಖರಾದ ಡಾ. ಗಿರೀಶ ಕೆಂಚಪ್ಪನವರ, ಡಾ. ರತ್ನಪ್ರಭಾ, ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ದೀಪಕ ಹರಪನಹಳ್ಳಿ, ಗದಿಗೆಪ್ಪ ಹೊಟ್ಟಿಗೌಡ್ರ, ರುಕ್ಮಿಣಿ ಸಾವಕಾರ, ಪರಮೇಶ ಗೂಳಣ್ಣನವರ, ಚಂದ್ರಣ್ಣ ಬೇಡರ ಮತ್ತಿತರರು ಪಾಲ್ಗೊಂಡಿದ್ದರು.