ನ್ಯೂಸ್

ಪ್ರವಾಸೋದ್ಯಮ ಅಭಿವೃದ್ಧಿಗೆ ಯುದ್ಧ ಟ್ಯಾಂಕರ್​ ಸ್ಥಾಪನೆ ಇಂದು

Haveri - Kariyappa Aralikatti

ರಾಣೆಬೆನ್ನೂರ: ಸ್ಥಳಿಯವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಗರದಲ್ಲಿ ಯುದ್ಧ ಟ್ಯಾಂಕರ್​ ಸ್ಥಾಪನೆ, ಬೆಟ್ಟ ಮಲ್ಲಪ್ಪನ ಗುಡ್ಡಕ್ಕೆ ಜೀಪ್​ ಚಾಲನೆ, ದೊಡ್ಡಕೆರೆಯಲ್ಲಿ ಬೋಟಿಂಗ್​ ವ್ಯವಸ್ಥೆಗೆ ಆ. 15ರಂದು ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 7.30ಕ್ಕೆ ನಗರದ ಎಪಿಎಂಸಿ ಗಣಪತಿ ದೇವಸ್ಥಾನದ ಬಳಿ ಯುದ್ಧ ಟ್ಯಾಂಕರ್​ಗೆ ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್​ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸುವರು. ಅಲ್ಲಿಂದ ಮೆರವಣಿಗೆಯೊಂದಿಗೆ ಯುದ್ಧ ಟ್ಯಾಂಕರ್​ ಮುನ್ಸಿಪಲ್​ ಮೈದಾನಕ್ಕೆ ಬರಲಿದೆ. ಅಲ್ಲಿ ಧ್ವಜಾರೋಹಣ ಮುಗಿದ ಬಳಿಕ ಮಿನಿ ವಿಧಾನಸೌಧಕ್ಕೆ ತಂದು ಸ್ಥಾಪಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಯುದ್ಧ ಟ್ಯಾಂಕರ್​ ಸಾರ್ವಜನಿಕರ ಪ್ರದರ್ಶನಕ್ಕೆ ಅನಾವರಣಗೊಳಿಸುವರು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಸೇರಿ ಬೆಟ್ಟ ಮಲ್ಲಪ್ಪನ ಗುಡ್ಡಕ್ಕೆ ಜೀಪ್​ ಚಾಲನೆ, ದೊಡ್ಡಕೆರೆಯಲ್ಲಿ ಬೋಟಿಂಗ್​ ವ್ಯವಸ್ಥೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಯುದ್ಧ ಟ್ಯಾಂಕರ್​ ಉದ್ಘಾಟನೆ ಸಮಯದಲ್ಲಿ ಎಲ್ಲ ಪಕ್ಷದವರನ್ನು ಆಹ್ವಾನ ಮಾಡಿದ್ದೇನೆ. ಇದು ದೇಶಾಭಿಮಾನದ ಸಂಕೇತವಾಗಿದ್ದು ಎಲ್ಲ ಮಾಜಿ ಶಾಸಕರು, ಮಾಜಿ ಸೈನಿಕರನ್ನು ಸೇರಿ ಎಲ್ಲರಿಗೂ ಕರೆಯಲಾಗಿದೆ. ಪಾತೀತವಾಗಿ ಈ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಯುದ್ಧ ಟ್ಯಾಂಕರ್​ ಇಡಲು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಕಟ್ಟೆ ನಿಮಿರ್ಸಲಾಗಿದೆ. ಆದ್ದರಿಂದ ಅದರ ಮೇಲೆ ನನ್ನ ಹೆಸರು, ಭಾವಚಿತ್ರ ಹಾಕಿಸಿದ್ದೇನೆ. ಇದರ ಜತೆಗೆ ಯುದ್ಧ ಟ್ಯಾಂಕರ್​ ಪರಾಕ್ರಮ ಕುರಿತು ಹಿತ್ತಾಳೆ ಪ್ಲೇಟ್​ನಲ್ಲಿ ಸಮಗ್ರ ಮಾಹಿತಿ ಒಳಗೊಂಡ ನಾಮಲಕ ಸಿದ್ಧಪಡಿಸಿದ್ದು ಅದನ್ನು ಅಳವಡಿಸಲಾಗುವುದು ಎಂದರು.