ನ್ಯೂಸ್

ಬೆಳೆವಿಮೆ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳುವುದನ್ನು ವಿರೋಧಿಸಿ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

ರಾಣೆಬೆನ್ನೂರ: ಬ್ಯಾಂಕ್‌ನವರು ರೈತರ ಖಾತೆಗೆ ಜಮಾ ಆಗಿರುವ ಬೆಳೆವಿಮೆ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದು, ಕೂಡಲೇ ಲೀಡ್ ಬ್ಯಾಂಕ್‌ನವರು ಇದನ್ನು ತಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ತಾಲೂಕಿನ ಮಾಕನೂರ ಗ್ರಾಮದ ಬ್ಯಾಂಕ್‌ವೊಂದರ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ರೈತರ ಖಾತೆಗೆ ಜಮಾ ಆಗಿರುವ ಬೆಳೆವಿಮೆ ಹಣದ ಜತೆಗೆ ವಿಧವಾ ವೇತನ, ಪಿಂಚಣಿ, ಮಾಶಾಸನ ಉದ್ಯೋಗ ಖಾತ್ರಿಯಂಥ ವಿವಿಧ ಯೋಜನೆಗಳ ಹಣವನ್ನು ಬ್ಯಾಂಕಿನವರು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.
ರೈತರ, ಕೃಷಿ ಕಾರ್ಮಿಕರ ಸಂಕಷ್ಟಕ್ಕೆ ಅನುಕೂಲವಾಗಲಿ ಎಂದಿರುವ ಬೆಳೆವಿಮೆ, ಉದ್ಯೋಗ ಖಾತ್ರಿ, ಬೆಳೆಪರಿಹಾರ ಮತ್ತು ಸರ್ಕಾರದ ಪಿಂಚಣಿ ಯೋಜನೆಗಳ ಹಣವನ್ನು ಬ್ಯಾಂಕ್‌ನವರು ಕಾನೂನು ನಿಯಮ ಉಲ್ಲಂಘಿಸಿ ರೈತರ ಸಾಲದ ಖಾತೆಗೆ ಜಮಾ ಮಾಡಿಕೊಂಡು ಲಾಕ್ ಮಾಡಿಕೊಂಡಿರುತ್ತಾರೆ.
ಅತಿವೃಷ್ಟಿ, ಬೆಲೆ ಏರಿಕೆ, ಕರೊನಾ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಬಳಲಿ ಬೆಂಡಾಗಿರುವ ರೈತ ಸಮುದಾಯಕ್ಕೆ ಬ್ಯಾಂಕ್‌ನವರ ಈ ವರ್ತನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆಗಾಲದ ಬಿತ್ತನೆಯ ಈ ಸಂದರ್ಭದಲ್ಲಿ ರೈತರಿಗೆ ಈ ಯೋಜನೆಗಳಿಂದ ಬರುವ ಹಣವೆ ಬೀಜ, ರಸಗೊಬ್ಬರ ಖರೀದಿಗೆ ಆಧಾರವಾಗಿದೆ. ಆದ್ದರಿಂದ ಕೂಡಲೇ ರೈತರ ವಿವಿಧ ಯೋಜನೆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡ ಹಣವನ್ನು ವಾಪಸ್ ನೀಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಬಂದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಮಾತನಾಡಿ, ಈ ಬಗ್ಗೆ ಬ್ಯಾಂಕ್‌ನವರಿಗೆ ಸೂಚನೆ ನೀಡಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂತೆಗೆದುಕೊಂಡರು.