ನ್ಯೂಸ್

ಸಂಶೋಧನೆ ಅನುಷ್ಟಾನಗೊಂಡು ಜನರಿಗೆ ಅನುಕೂಲವಾಗಬೇಕು; ಶಾಸಕ ಪ್ರಕಾಶ ಕೋಳವಾಡ

ರಾಣೆಬೆನ್ನೂರ: ಸಂಶೋಧನೆ ಕೇವಲ ಮಾಧ್ಯಮಗಳ ಸುದ್ದಿಯಾಗಿ ಹತ್ತರ ಜತೆ ಹನ್ನೊಂದಾದರೆ ಸಾಲದು, ಆ ಸಂಶೋಧನೆ ಅನುಷ್ಟಾನಗೊಂಡು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನೋಡಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜ್‌ನಲ್ಲಿ ಬಹುಶಿಸ್ತಿಯ ಸಂಶೋಧನಾ ವಿಧಾನಗಳು ಎಂಬ ವಿಷಯ ಕುರಿತು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಕಾರ್ಯಾಗಾರ ಹಾಗೂ ಪ್ರಬಂಧ ಸೆಮಿನಾರ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕೂಡ ಇಪ್ಪತ್ತು ವರ್ಷಗಳ ಕಾಲ ಪ್ರಧಾನಮಂತ್ರಿ ಕಚೇರಿಯ ಭೂ ವಿಜ್ಞಾನಿ ಅವರೊಂದಿಗೆ ಮೋಡ ಬಿತ್ತನೆ ಬಗ್ಗೆ ಸಂಪೂರ್ಣವಾಗಿ ಅವಲೋಕಿಸಿ ಸಂಶೋಧನೆ ನಡೆಸಿದ್ದೇನೆ. ಮೋಡ ಬಿತ್ತನೆಯಿಂದ ಬರುವ ಮಳೆಯ ಪ್ರಮಾಣ ಹಾಗೂ ಅದರಿಂದ ಏನಾದರೂ ತೊಂದರೆ ಉಂಟಾಗುವ ಬಗ್ಗೆ ಹತ್ತು ವರ್ಷ ಸಂಶೋಧನೆ ನಡೆಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ ಎಂದರು.
ಕೆಎಲ್‌ಇ ಸಂಸ್ಥೆ ಸ್ಥಳೀಯ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪಂಜಾಬನ ಇಬ್ಬರು ಉಪನ್ಯಾಸಕರು ಹಾಗೂ ಹೈದರಾಬಾದ್‌ನ ಒಬ್ಬ ಉಪನ್ಯಾಸಕರು ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 150ಕ್ಕೂ ಅಧಿಕ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ವಿಜಯಪುರದ ಕೆಎಸ್‌ಎಡಬ್ಲೂಯು ಪ್ರೊ. ಬಿ.ಎಸ್. ನಾವಿ, ಅರುಣರಾಜೆ ಪಾಟೀಲ, ಸಂಸ್ಥೆ ಸದಸ್ಯರಾದ ಬಸವರಾಜ ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಮಹಿಳಾ ಕಾಲೇಜ್‌ನ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ, ಎಸ್.ಎಲ್. ಕರಿವಾಡ, ಅನುರಾಧ ಎಸ್. ಮತ್ತಿತರರು ಉಪಸ್ಥಿತರಿದ್ದರು.