ನ್ಯೂಸ್

ನಗರದ ಸಮಸ್ಯೆ ಬಗೆಹರಿಸಲು ಜನರ ಆಗ್ರಹ; ಮನವಿ ಸಲ್ಲಿಕೆ

ರಾಣೆಬೆನ್ನೂರ: ನಗರದಲ್ಲಿ ಅತಿಕ್ರಮಣ ಆಗಿರುವ ರಸ್ತೆಗಳನ್ನು ತೆರವುಗೊಳಿಸಬೇಕು. ರಾಜ ಕಾಲುವೆ ಒತ್ತುವರಿ ತೆರವು, ಚರಂಡಿ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಶಹರ ನೈರ್ಮಲ್ಯೀಕರಣ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಶಹರದ ವ್ಯಾಪ್ತಿಯ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಕಾಲುವೆ ಅಕ್ರಮ ಮಾಡಿಕೊಂಡು ನಿಮಿರ್ಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ದೊಡ್ಡಕೆರೆಗೆ ಚರಂಡಿ ನೀರು ನೇರವಾಗಿ ಹೋಗುತ್ತಿರುವುದನ್ನು ತಡೆಗಟ್ಟಿ ಬೂದು ನೀರು ನಿರ್ವಹಣೆ ಕಾಮಗಾರಿ ಮಾಡಬೇಕು.

ಎಲ್ಲಿ ಬೇಕೆಂದರಲ್ಲಿ ಯಾವುದೇ ಕಾನೂನಿಗೆ ಬೆಲೆ ನೀಡದೆ ಕೋಳಿ ಮತ್ತು ಕುರಿ ಮಾಂಸ ಮಾರಾಟದ ಅಂಗಡಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕ ರಸ್ತೆಯ ಮೇಲೆ ಮತ್ತು ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ನಿಮಿರ್ಸಿರುವ ವಾಣಿಜ್ಯ ಮಳಿಗೆ, ಹೋಟೆಲ್​ಗಳನ್ನು ತೆರವುಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಪ್ರಮುಖರಾದ ಹನುಮಂತಪ್ಪ ಕಬ್ಬಾರ, ಸಂತೋಷಕುಮಾರ ಮುದ್ದಿ, ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ವಿಜಯ ಕಲಕತ್ತಿ, ದ್ಯಾನಗೌಡ ಬಸನಗೌಡ, ವೀರೇಶ ಬಳ್ಳಾರಿ, ಬಾಬಣ್ಣ ಕೊಪ್ಪದ, ಶಾರದಮ್ಮ ಅಂಗಡಿ, ಮುನ್ನಿ ಹರಿಹರ ಮತ್ತಿತರರು ಉಪಸ್ಥಿತರಿದ್ದರು.