ನ್ಯೂಸ್

ಜೈ ಭೀಮ ರಥಯಾತ್ರೆಗೆ ಬಿಜೆಪಿಯಿಂದ ಸ್ವಾಗತ

ರಾಣೆಬೆನ್ನೂರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿವರೆಗೆ ತೆರಳುತ್ತಿರುವ ಜೈ ಭೀಮ ರಥಯಾತ್ರೆಗೆ ಶನಿವಾರ ನಗರದ ಹೊರವಲಯದಲ್ಲಿ ಸ್ವಾಗತ ಕೋರಲಾಯಿತು.

ನಂತರ ರಥಯಾತ್ರೆಯೊಂದಿಗೆ ನಗರದ ಸ್ಟೇಷನ್​ ರಸ್ತೆಯ ಬಿಜೆಪಿ ಕಚೇರಿವರೆಗೆ ಬೈಕ್​ ರ್ಯಾಲಿ ನಡೆಸಲಾಯಿತು. ಕೋಲಾರದ ಮಾಜಿ ಸಂಸದ ಮುನಿಯಪ್ಪ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್​ ಶೋಷಿತ ವರ್ಗಗಳ ಧ್ವನಿಯಾಗಿದ್ದರು. ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್​ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದೆ. ಆದರೆ, ಇಂದಿನ ದಿನಮಾನದಲ್ಲಿ ಕೆಲವರು ತಮ್ಮ ಬೆಳವಣಿಗೆಗೆ ಅಂಬೇಡ್ಕರ್​ ಅವರ ಹೆಸರು ಬಳಸಿಕೊಳ್ಳುತ್ತಾರೆ. ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ನಂತರ ಹಳೆ ಪಿ.ಬಿ. ರಸ್ತೆ ಮೂಲಕ ಹರಿಹರಕ್ಕೆ ಬೀಲ್ಕೊಡಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಗ್ರಾಮೀಣ ಘಟಕದ ಅಧ್ಯಕ್ಷ ಪರಮೇಶ ಗೂಳಣ್ಣನವರ, ಶಹರ ಘಟಕದ ಅಧ್ಯಕ್ಷ ರಮೇಶ ಗುತ್ತಲ, ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮೈಲಪ್ಪ ಗೋಣಿಬಸಮ್ಮನವರ, ಗೀತಾ ಜಂಬಗಿ, ಗದಿಗೆಪ್ಪ ಹೊಟ್ಟಿಗೌಡ್ರ, ಎ.ಬಿ. ಪಾಟೀಲ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.