ನ್ಯೂಸ್

ಕೋಲ್ಡ್​ ಸ್ಟೋರೇಜ್​ನಿಂದ ರೈತರಿಗೆ ಅನುಕೂಲ; ಸಚಿವ ಶಿವಾನಂದ

Haveri - Kariyappa Aralikatti

ರಾಣೆಬೆನ್ನೂರ: ಜಿಲ್ಲೆಯ ರೈತರು ಬೆಳೆದಂತಹ ಆಹಾರ ಉತ್ಪನ್ನಗಳನ್ನು ಕೆಡದಂತೆ, ಹಾಳಾಗದಂತೆ ಶೇಖರಿಸಿಡಲು ಹಾಗೂ ಅವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವ ದೃಷ್ಟಿಯಿಂದ 30 ಕೋಟಿ ರೂ. ವೆಚ್ಚದಲ್ಲಿ ಶೀಥಲ ಗೃಹ ನಿರ್ಮಾಣ ಮಾಡುತ್ತಿದ್ದೇವೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಹೂಲಿಹಳ್ಳಿ- ಬಳಿಯ ಕೃಷಿ ಉತ್ಪನ್ನ ಮೆಗಾ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭಾನುವಾರ 8794 ಮೆಟ್ರಿಕ್​ ಟನ್​ ಸಾಮರ್ಥ್ಯದ ಮೂರು ನೂತನ ಕೋಲ್ಡ್​ ಸ್ಟೋರೇಜ್​ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ 153 ಜನರಿಗೆ ಮಳಿಗೆಗಳನ್ನು ಹಂಚಿಕೆ ಮಾಡಿದ್ದೇವೆ. ಆದರೆ ಅವರು ಇನ್ನೂ ಅಂಗಡಿಗಳನ್ನು ತೆರೆದಿಲ್ಲ. ಮುಂದಿನ ದಿನದಲ್ಲಿ ಅವರು ಅಂಗಡಿ ತೆರೆದರೆ, ಇದು ರಾಜ್ಯದ ಆಧುನಿಕ ಮಾರುಕಟ್ಟೆ ಆಗಲಿದೆ. ಹುಬ್ಬಳ್ಳಿ, ಮೈಸೂರು ಮಾರುಕಟ್ಟೆಗಳನ್ನು ಹೊರತು ಪಡಿಸಿದರೆ ಮದ್ಯ ಕರ್ನಾಟಕದಲ್ಲಿ ರಾಣೆಬೆನ್ನೂರ ಮಾರುಕಟ್ಟೆಯು ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದರು.

2019&-20ರಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳು ಬಂದಾಗಿದ್ದಾವು. ನಮ್ಮ ಸರ್ಕಾರ ಬಂದ ಮೇಲೆ ಎಪಿಎಂಸಿ ಕಾನೂನು ಪುನಃ ಸ್ಥಾಪಿಸಿ ಎಪಿಎಂಸಿಗಳನ್ನು ಆರಂಭಿಸಿದ್ದೇವೆ. ಒಂದು ಕಾಲದಲ್ಲಿ ಪ್ರತಿ 100 ರೂ.ಗೆ 1.50 ಪೈಸೆ ಸೆಸ್​ ಇದ್ದಾಗ 600 ಕೋಟಿ ರೂ. ಆದಾಯ ಇತ್ತು. ಈಗ 1.50 ಪೈಸೆ ಸೆಸ್​ ಇಲ್ಲ. ಬದಲಿಗೆ ಪ್ರತಿ 100 ರೂ.ಗೆ ಕೇವಲ 60 ಪೈಸೆ ಸೆಸ್​ ಇದೆ. ಇಷ್ಟು ಕಡಿಮೆ ಸೆಸ್​ ಹಾಕಿ ಮೊದಲನೇ ವರ್ಷದಲ್ಲಿಯೇ 500 ಕೋಟಿ ರೂ. ಆದಾಯ ತಂದಿರುವುದು ಇತಿಹಾಸಕವಾಗಿದೆ.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಅಜೀಮ್​ಪೀರ ಖಾದ್ರಿ, ಜಿಪಂ ಸಿಇಒ ರುಚಿ ಬಿಂದಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್​. ನಾಗರಾಜ, ಎಪಿಎಂಸಿ ಕಾರ್ಯದಶಿರ್ ಶೈಲಜಾ ಎಂ.ವಿ., ಸಹಾಯಕ ಕಾರ್ಯದಶಿರ್ ಪರಮೇಶ ನಾಯ್ಕ, ಅಸುಂಡಿ ಗ್ರಾಪಂ ಅಧ್ಯೆ ಲೀಲಾ ಹಲಗೇರಿ, ಪ್ರಮುಖರಾದ ಬಸವರಾಜ ಸವಣೂರ, ಮಂಜನಗೌಡ ಪಾಟೀಲ, ಏಕನಾಥ ಭಾನುವಳ್ಳಿ ಮತ್ತಿತರರು ಉಪಸ್ಥಿತರಿದ್ದರು.