ನ್ಯೂಸ್

ಎರಡನೇ ಪಶು ಆಸ್ಪತ್ರೆ ಆರಂಭಿಸಲು ಒತ್ತಾಯಿಸಿ ಮನವಿ

ರಾಣೆಬೆನ್ನೂರ: ನಗರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎರಡನೇ ಪಶು ಆಸ್ಪತ್ರೆ ಆರಂಭಿಸಬೇಕು ಎಂದು ಒತ್ತಾಯಿಸಿ ಇಲ್ಲಿಯ ಸದೃಢ ನಿರ್ಮಾಣ ವೇದಿಕೆ ವತಿಯಿಂದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವೆಂಕಟೇಶ ಬಿದರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಕುರುಬಗೇರಿ, ದೊಡ್ಡಪೇಟೆ, ಗೌಳಿಗಲ್ಲಿ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ರೈತರು ಎತ್ತು, ಎಮ್ಮೆ, ಆಕಳು ಸಾಕಿಕೊಂಡಿದ್ದಾರೆ. ಅವುಗಳಿಗೆ ಆರೋಗ್ಯದ ಸಮಸ್ಯೆ ಎದುರಾದರೆ ನಗರದ ಸಂಗಮ್​ ವೃತ್ತದಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಬರಬೇಕು. ಆದರೆ, ಇಲ್ಲಿಗೆ ಬರಲು ಕುರುಬಗೇರಿ ರೈತರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಅಲ್ಲದೆ ಸ್ಥಳಿಯವಾಗಿ ಜಾನುವಾರುಗಳ ಸಂಖ್ಯೆ ಕೂಡ ಅಧಿಕವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕುರುಬಗೇರಿ ಭಾಗದಲ್ಲಿ ಪಶು ಆಸ್ಪತ್ರೆ ತೆರೆಯಬೇಕು. ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಒತ್ತಾಯಿಸಿದರು.

ಪ್ರಮುಖರಾದ ಮಂಜುನಾಥ ಗುಡ್ಡಪ್ಪನವರ, ಚಂದ್ರಶೇಖರ ಕಾಂಬಳೆ, ರಾಜೇಶ ಅಂಗಡಿ, ಹನುಮಂತಪ್ಪ ಹಾಲಬಾವಿ, ಪರಶುರಾಮ ಗುಡ್ಡಣ್ಣನವರ, ಸಿದ್ದಲಿಂಗಪ್ಪ ಹಂಜಿ, ಮಹೇಶ ಕಮ್ಮಾರ, ರಾವೇಂದ್ರ ತ್ರಾಸದ, ಕೋಟ್ರೇಶ ಕರಡಿಮಠ ಮತ್ತಿತರರು ಉಪಸ್ಥಿತರಿದ್ದರು.