ನ್ಯೂಸ್

ವರ್ಗಾವಣೆ ಸುಗ್ಗಿ, ಹಫ್ತಾ ವಸೂಲಿ ಅಡ್ಡೆ; ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಮುಂದಿನ ಐದು ವರ್ಷಗಳಿಗೆ ಆಡಳಿತದ ದಿಕ್ಸೂಚಿ ನೀಡಬೇಕಾದ ರಾಜ್ಯ ಸರ್ಕಾರ ದಿಕ್ಕು ತಪ್ಪಿದೆ. ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗಳ ಸುಗ್ಗಿ ನಡೆಯುತ್ತಿದೆ. ಆರ್‌ಟಿಒ ಕಚೇರಿ, ಪೊಲೀಸ್ ಠಾಣೆಗಳು ಹಫ್ತಾ ವಸೂಲಿ ಅಡ್ಡೆಗಳಾಗಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೂಡಿ ‘ಕೈಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತ’ ಚಾರ್ಜ್‌ಶೀಟ್ (ಕಿರು ಹೊತ್ತಗೆ)ನ್ನು ಮಂಗಳವಾರ ಬಿಡುಗಡೆ ಮಾಡಿದರು. ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಲ್ಯ ಹಾಗೂ ಜನ ವಿರೋಧಿ ಆಡಳಿತ ಅನಾವರಣಗೊಳಿಸಿದರು.

ಸಂಪೂರ್ಣ ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಆರಂಭ ಮಾಡಿ ಯಾವ ರೀತಿ ದಿಕ್ಸೂಚಿ ನೀಡಬೆಕಾಗಿತ್ತು ಅದರ ಬದಲು ದಿಕ್ಕು ತಪ್ಪಿದ ಸರ್ಕಾರ ಇದಾಗಿದೆ. ಸರ್ಕಾರ ಗೊಂದಲದಲ್ಲಿ ಸಿಲುಕಿ ಮಾತಿಗೆ ತಪ್ಪಿದ ಸರ್ಕಾರ ಇದಾಗಿದೆ. ರಾಜ್ಯದಲ್ಲಿ ಬರಗಾಲ ಬಂದರೂ ರೈತರ ಕಡೆ ತಿರುಗಿ ನೋಡಿಲ್ಲ.

ಎರಡು ಬಾರಿ ಬಿತ್ತನೆ ಮಾಡಿದ್ದರೂ ಬೆಳೆ ಬಾರದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 4500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬೇಕಿದೆ. ಸಾಲ ವಸೂಲಿ ನಿಲ್ಲಿಸಬೇಕು. ಕೃಷಿ ಇಲಾಖೆಯಲ್ಲಿ ಟ್ರಾನ್ಸ್ ಫರ್ ಸುಗ್ಗಿ ನಡೆಯುತ್ತಿದೆ. ಎಲ್ಲ ಇಲಾಖೆಗಳಲ್ಲಿ ಟ್ರಾನ್ಸ್ ಫರ್ ಸುಗ್ಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಹಗಲು ದರೋಡೆ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳ ನಡುವೆ ಭ್ರಷ್ಟಾಚಾದ ಜಗಳ ನಡೆಯುತ್ತಿದೆ. ಬೆಂಗಳೂರು ರೂರಲ್ ಎಸಿ, ಡಿಸಿ ಹುದ್ದೆಗಳಿಗೆ ಹರಾಜು ನಡೆಯುತ್ತಿದೆ. ಬೆಂಗಳೂರು ಎಸಿ ರೇಟ್ ಜಾಸ್ತಿಯಾಗಿದೆಯಂತೆ ಈಗ 13 ಕೋಟಿಗೆ ಏರಿದೆಯಂತೆ. ಕ್ರೈಮ ಗಳು ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ಬಾರ್ ಗಳು ತಲೆ ಎತ್ತುತ್ತಿವೆ. ಮಂತ್ರಿಗಳಿಗೆ ಕಮಿಷನ್ ನೀಡಲು ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಪೂರ್ಣ ಸ್ಥಗಿತ ಆಗಿದೆ ಎಂದು ಹೇಳಿದರು.

ಕಾವೇರಿ ರಾಜ್ಯದ ಹಿತ ಕಾಯುವಲ್ಲಿ ವಿಫಲ

ಕಾವೇರಿ ವಿಷಯದಲ್ಲಿ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ. ರಾಜ್ಯದ ಹಿತ ಕಾಯುವಲ್ಲಿ ಸರ್ಕಾರ ವಿಫಲ ಆಗಿದೆ ಅಂತ ಸರ್ವಪಕ್ಷದ ಸಭೆಯಲ್ಲಿ ಹೇಳಿದ್ದೇನೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸೂಚನೆ ನೀಡಿರುವದನ್ನು ಪ್ರಶ್ನಿಸಲು ಇನ್ನೂ ಸುಪ್ರೀಂ ಕೋರ್ಟ್ ಗೆ ಯಾಕೆ ಹೋಗಿಲ್ಲ. ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಎರಡು ಬಾರಿ ವಿಚಾರಣೆ ನಡೆಯಿತು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದರೆ ನಮ್ಮ ರೈತರ ಪರಿಸ್ಥಿತಿ ಏನಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಲ್ಲಿ 135 ಶಾಸಕರಿದ್ದರೂ ಅಲ್ಲಿ ಸ್ಥಿರತೆ ಇಲ್ಲ. ಅದಕ್ಕಾಗಿ ಪ್ರತಿಪಕ್ಷದ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ನಾವು ಆರಂಭದಿಂದಲೂ ಎಲ್ಲರೂ ಪ್ರತಿಪಕ್ಷದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆವೆ. 66 ಶಾಸಕರೂ ಸದನದ ಒಳಗೆ ಪ್ರತಿಪಕ್ಷದ ನಾಯಕನ ಸ್ಥಾನ ನಿಭಾಯಿಸಿದ್ದೇವೆ. ಒಂದು ಪಕ್ಷವಾಗಿ ಎಲ್ಲರೂ ಸೇರಿ ಸದನದ ಹೊರಗೆ ಹೋರಾಟ ನಡೆಸುತ್ತಿದ್ದೇವೆ. ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಜರಿದ್ದರು