Delhi DTC Bus Accident: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಟಿಸಿ ಬಸ್ಗಳಿಂದ ಸಂಭವಿಸುತ್ತಿರುವ ಅಪಘಾತಗಳ ಆತಂಕ ಮುಂದುವರಿದಿದೆ. ಶನಿವಾರ ಆನಂದ್ ಪರ್ಬತ್ ಪ್ರದೇಶದಲ್ಲಿ ವೇಗವಾಗಿ ಬಂದ ದೆಹಲಿ ಸಾರಿಗೆ ಸಂಸ್ಥೆಯ (DTC) ಬಸ್ ವಾಹನಗಳು ಮತ್ತು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆನಂದ್ ಪರ್ಬತ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಟಿಕ್ರಿ ಗಡಿಯತ್ತ ತೆರಳುತ್ತಿದ್ದ ಡಿಟಿಸಿ ಬಸ್, ಇ-ರಿಕ್ಷಾ, ಎರಡು ಬೈಕ್ಗಳು ಹಾಗೂ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಬಸ್ ಚಾಲಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಅತಿವೇಗದಲ್ಲಿ ಚಲಿಸುತ್ತಿದ್ದಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ ಚಾಲನೆ ಮಾಡುತ್ತಿದ್ದವರು ಮಹಿಳೆಯಾಗಿದ್ದು, ಬಸ್ ಡಿಕ್ಕಿ ಹೊಡೆಯುವುದನ್ನು ಕಂಡ ಪಾದಚಾರಿಗಳು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಕೆಲವರು ಅಪಘಾತಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆನಂದ್ ಪರ್ಬತ್ ಪ್ರದೇಶದಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಪಾದಚಾರಿಗಳಿಗೆ ನಡೆಯಲು ಜಾಗವಿಲ್ಲದಂತಾಗಿದೆ. ರಿಕ್ಷಾಗಳು ಮತ್ತು ಅಂಗಡಿಗಳಿಂದ ರಸ್ತೆ ಒತ್ತುವರಿಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಪೊಲೀಸರು ಕೂಡ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸುವುದಿಲ್ಲ ಎಂದು ದೂರಿದ್ದಾರೆ.
ಇತ್ತ, ಅಪಘಾತದ ಬೆನ್ನಲ್ಲೇ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಘಟನೆ ಕುರಿತು ತನಿಖೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದೆಹಲಿಯ ದ್ವಾರಕಾ ಸೆಕ್ಟರ್ 18ರ ಕ್ರೆಸೆಂಟ್ ಅಪಾರ್ಟ್ಮೆಂಟ್ ರೆಡ್ಲೈಟ್ ಸಮೀಪ ಶನಿವಾರ ಮುಂಜಾನೆ ಟ್ರಕ್ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮುಂಜಾನೆ ಸುಮಾರು 12.45ಕ್ಕೆ ಎರಡು ಬೈಕ್ಗಳಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಎರಡೂ ಬೈಕ್ಗಳಲ್ಲಿ ತಲಾ ಇಬ್ಬರಂತೆ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ಉತ್ತರ ಪ್ರದೇಶದ ಆಗ್ರಾ ನಿವಾಸಿ, 41 ವರ್ಷದ ಟ್ರಕ್ ಚಾಲಕ ಹೋತಮ್ ಸಿಂಗ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಕ್, ಎರಡೂ ಬೈಕ್ಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ದ್ವಾರಕಾ ನಾರ್ತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.