ತಿರುವನಂತಪುರಂನಲ್ಲಿ ಪೊಲೀಸರ ಮೇಲೆ ಥಾರ್ ಹರಿಸಿದ ಡ್ರಗ್ಸ್ ದಂಧೆಕೋರರು 
ನ್ಯೂಸ್

ಡ್ರಗ್ಸ್ ದಂಧೆಕೋರರ ಅಟ್ಟಹಾಸ: ಪೊಲೀಸರ ಮೇಲೆಯೇ ಥಾರ್ ಹತ್ತಿಸಿದ ಕಿರಾತಕರು| Kerala Drug Trafficking

Kerala Drug Trafficking: ಡ್ರಗ್ಸ್ ಸಾಗಾಟ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಮಹೀಂದ್ರಾ ಥಾರ್ ಎಸ್‌ಯುವಿ ಹರಿಸಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಆರೋಪಿಗಳು ವಾಹನವನ್ನು ಪೊಲೀಸರ ಮೇಲೆ ನುಗ್ಗಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಎಂಡಿಎಂಎ ಮಾದಕ ವಸ್ತು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಿರುವನಂತಪುರಂ ಹೊರವಲಯದ ಕಜಕ್ಕೂಟ್ಟಂನ ವೆಟ್ಟೂರೋಡ್‌ನಲ್ಲಿ ಈ ಘಟನೆ ನಡೆದಿದೆ. ಎಂಡಿಎಂಎ ಸಾಗಾಟದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಾದಕವಸ್ತು ನಿಗ್ರಹ ವಿಶೇಷ ಕಾರ್ಯಪಡೆ (DANSAF) ತಂಡ ಥಾರ್ ವಾಹನವನ್ನು ತಡೆಯಲು ಮುಂದಾಗಿತ್ತು. ಈ ವೇಳೆ ಸಿವಿಲ್ ಪೊಲೀಸ್ ಅಧಿಕಾರಿ ದೀಪು ರಾಜ್ ತಮ್ಮ ಬೈಕ್ ಅನ್ನು ಥಾರ್ ಮುಂದೆ ನಿಲ್ಲಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಗಳು ವಾಹನವನ್ನು ವೇಗವಾಗಿ ಚಲಾಯಿಸಿ ಬೈಕ್ ಸಮೇತ ದೀಪು ರಾಜ್ ಅವರ ಮೇಲೆ ಹರಿಸಿದ್ದಾರೆ. ಬೈಕ್ ಥಾರ್‌ನ ಕೆಳಗೆ ಸಿಲುಕಿಕೊಂಡಿದ್ದರಿಂದ ವಾಹನ ಅಲ್ಲಿಯೇ ನಿಂತಿದೆ.

ಸ್ಥಳದಲ್ಲಿದ್ದ ಇತರ ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಥಾರ್‌ನಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಡೆದ ಗಲಾಟೆಯಲ್ಲಿ ಮತ್ತೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ದೀಪು ರಾಜ್ ಅವರ ಎಡಗೈ ಮತ್ತು ಭುಜದ ಮೂಳೆ ಮುರಿದಿದ್ದು, ಮೊದಲು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಇನ್ನೂ ಎರಡು-ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಬಂಧಿತರನ್ನು ತಿರುವಲ್ಲಂನ ಅಭಿಷೇಕ್ (26), ವೆಟ್ಟುಕಾಡ್‌ನ ರತೀಶ್ (41) ಹಾಗೂ ಕಾಸರಗೋಡಿನ ಸ್ವಾಲಿ (26) ಎಂದು ಗುರುತಿಸಲಾಗಿದೆ. ಅವರಿಂದ 11 ಗ್ರಾಂ ಎಂಡಿಎಂಎ ಹಾಗೂ 25 ಸಾವಿರ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 9 ಗ್ರಾಂ ಆರೋಪಿಗಳ ಬಳಿ ಪತ್ತೆಯಾಗಿದ್ದರೆ, ಉಳಿದ 2 ಗ್ರಾಂ ಥಾರ್‌ನ ರಹಸ್ಯ ವಿಭಾಗದಲ್ಲಿ ಸಿಕ್ಕಿದೆ. ವಶಪಡಿಸಿಕೊಂಡ ಹಣ ಡ್ರಗ್ಸ್ ಮಾರಾಟದಿಂದ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ..

ಥಾರ್ ವಾಹನ ಅಭಿಷೇಕ್‌ಗೆ ಸೇರಿದ್ದು ಎನ್ನಲಾಗಿದೆ. ಆರೋಪಿಗಳು ಸಿಂಥೆಟಿಕ್ ಡ್ರಗ್ಸ್ ವಿತರಣೆಯಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ಇತ್ತು. ಈ ಹಿಂದೆ ಕೂಡ ಅವರನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದರೂ ಅವರು ತಪ್ಪಿಸಿಕೊಂಡಿದ್ದರು. ಇದೀಗ ಎಂಡಿಎಂಎ ಪೂರೈಕೆಯ ಮೂಲದ ಬಗ್ಗೆ ತನಿಖೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕಿತ ಪೂರೈಕೆದಾರನ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ, ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರ ಮೇಲಿನ ದಾಳಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಾನೂನು ಜಾರಿ ಮಾಡುವ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸುವ ಮತ್ತು ಅವರ ಮೇಲೆ ದಾಳಿ ನಡೆಸುವ ಕ್ರಿಮಿನಲ್ ಗ್ಯಾಂಗ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಿನ ಓಟದಿಂದ ದೇಹಕ್ಕಷ್ಟೇ ಅಲ್ಲ, ಮೆದುಳಿಗೂ ಲಾಭ! ಜಾಗಿಂಗ್‌ನ 4 ಅದ್ಭುತ ಪ್ರಯೋಜನಗಳು | Morning Jogging Benefits

ಈ ಸಂಬಂಧ ಕಜಕ್ಕೂಟ್ಟಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪದಡಿ ಕೊಲೆ ಯತ್ನ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ದಾಖಲಿಸಲಾಗಿದೆ. ಮತ್ತೊಂದು ಪ್ರಕರಣವನ್ನು ಎಂಡಿಎಂಎ ಹೊಂದಿದ್ದ ಮತ್ತು ಸಾಗಾಟ ಮಾಡುತ್ತಿದ್ದ ಆರೋಪದಡಿ ದಾಖಲಿಸಲಾಗಿದೆ. ಮೂವರನ್ನೂ ಅಟ್ಟಿಂಗಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.